×
Ad

ಮಹಿಮೆಗೆ ಚ್ಯುತಿ ಬಾರದಂತೆ ದೇವರನ್ನು ವರ್ಣಿಸಿ: ಕೃಷ್ಣಾಪುರ ಸ್ವಾಮೀಜಿ

Update: 2017-09-11 22:55 IST

ಉಡುಪಿ, ಸೆ.11: ದೇವರ ಮಹಿಮೆಗೆ ಚ್ಯುತಿ ಬಾರದಂತೆ ವರ್ಣನೆ ಮಾಡ ಬೇಕು. ಚ್ಯುತಿ ಬಂದರೆ ದೇವರು ಅಲ್ಲ ಎಂಬ ಭಾವನೆ ಜನರಲ್ಲಿ ಮೂಡುತ್ತದೆ ಎಂದು ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಪೇಜಾವರ ಮಠದ ವತಿಯಿಂದ ಮಠದ ರಾಜಾಂಗಣದಲ್ಲಿ ಸೋಮವಾರ ಆಯೋಜಿಸಲಾದ ಶ್ರೀಕೃಷ್ಣಾಷ್ಟಮಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಶ್ರೀಕೃಷ್ಣ ಕೇವಲ ಬಲಕಾರ್ಯ ಮಾಡದೆ ಜ್ಞಾನ ಕಾರ್ಯವನ್ನು ಕೂಡ ಮಾಡಿದ್ದಾನೆ. ಕೃಷ್ಣನ ಸ್ಪೂರ್ತಿಯಿಂದಲೇ ಇಂದು ಶ್ರೀಕೃಷ್ಣ ಮಠದಲ್ಲಿ ಜ್ಞಾನ ಕಾರ್ಯ ಗಳು ನಡೆಯುತ್ತಿವೆ. ಭಕ್ತಿಯು ಜ್ಞಾನದ ಅಂಗ. ದೇವರನ್ನು ನಾವು ಸರಿಯಾಗಿ ತಿಳಿದುಕೊಂಡರೆ ಮಾತ್ರ ಭಕ್ತಿ ಮೂಡಲು ಸಾಧ್ಯ. ಹಾಗಾಗಿ ದೇವರ ಬಗ್ಗೆ ಪ್ರತಿಯೊಬ್ಬರಿಗೆ ಉತ್ತಮ ತಿಳುವಳಿಕೆ ಇರಬೇಕು ಎಂದರು.

‘ಕವಿಗಳು ಕಂಡ ಶ್ರೀಕೃಷ್ಣ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಕವಿ, ಅಂಕಣಕಾರ ಎಚ್.ಡುಂಡಿರಾಜ್, ಕೃಷ್ಣನದ್ದು ಕವಿಗಳಿಗೆ ಸ್ಪೂರ್ತಿ ನೀಡಿದ ವ್ಯಕ್ತಿತ್ವ. ರಾಮನಿಗಿಂತ ಕೃಷ್ಣನ ಬಗ್ಗೆ ಹೆಚ್ಚು ಕಾದಂಬರಿಗಳು, ಕವನಗಳು ಬಂದಿವೆ. ಇದಕ್ಕೆ ಕೃಷ್ಣನ ವಿಶಿಷ್ಟ ವ್ಯಕ್ತಿತ್ವವೇ ಕಾರಣ. ಹಾಗಾಗಿ ಕೃಷ್ಣ ಸಾಹಿತಿ ಹಾಗೂ ಕವಿಗಳ ಮೇಲೆ ಹೆಚ್ಚು ಪ್ರಭಾವ ಬೀರಿದ್ದಾರೆ ಎಂದರು.

ವಿಶೇಷ ಉಪನ್ಯಾಸ ನೀಡಿದ ಡುಂಡಿರಾಜ್ ಅವರ ಹನಿಗವನದಿಂದ ಸ್ಪೂರ್ತಿ ಗೊಂಡ ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ, ಸ್ಥಳದಲ್ಲೇ ರಚಿಸಿದ ಕೃಷ್ಣನ ಕುರಿತ ಹನಿಗವನವನ್ನು ವಾಚಿಸಿದರು.

ಪರ್ಯಾಯ ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಎಲ್.ಸಾಮಗ ಕಾರ್ಯ ಕ್ರಮ ನಿರೂಪಿಸಿ ಸ್ವಾಗತಿಸಿದರು. ಬಳಿಕ ಬೆಂಗಳೂರಿನ ವಿದ್ವಾನ್ ಆರ್.ಕೆ.ಪದ್ಮ ನಾಭ ಮತ್ತು ಬಳಗದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News