“ಸ್ವಲ್ಪ ಲಂಚ ತಗೊಳ್ಳಿ, ಪರ್ವಾಗಿಲ್ಲ”: ಉತ್ತರಪ್ರದೇಶದ ಉಪ ಮುಖ್ಯಮಂತ್ರಿಯ ವಿವಾದಾತ್ಮಕ ಹೇಳಿಕೆ
ಹೊಸದಿಲ್ಲಿ, ಸೆ. 5: ಉತ್ತರಪ್ರದೇಶದ ಉಪ ಮುಖ್ಯಮತ್ರಿ ಭ್ರಷ್ಟಾಚಾರದ ವಿರುದ್ಧ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ, ಅವರ ಹೇಳಿಕೆ ಈಗ ವಿವಾದಕ್ಕೆ ಗ್ರಾಸವಾಗಿದೆ.
ರವಿವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜ್ಯದ ಇಬ್ಬರು ಉಪ ಮುಖ್ಯಮಂತ್ರಿಗಳಲ್ಲಿ ಓರ್ವರಾದ ಕೇಶವ ಪ್ರಸಾದ್ ಮೌರ್ಯ, “ಲಂಚ ಪಡೆಯಿರಿ, ಆದರೆ ಅದು ನಿಮ್ಮ ಆಹಾರದಲ್ಲಿರುವ ಉಪ್ಪಿನ ಪ್ರಮಾಣದಷ್ಟಿರಲಿ” ಎಂದಿದ್ದಾರೆ.
“ಮಿತವಾಗಿ ಲಂಚ ತೆಗೆದುಕೊಳ್ಳಿ” ಎಂದು ಮೌರ್ಯ ಶಿಫಾರಸು ಮಾಡಿದಂತೆ ಅವರ ಹೇಳಿಕೆ ಇತರಿಗೆ ಕೇಳಿದೆ. ಮೌರ್ಯ ಅವರ ಹೇಳಿಕೆಯನ್ನು ತಿರುಚಲಾಗಿದೆ. ಉಪ ಮುಖ್ಯಮಂತ್ರಿ ಲಂಚ ತೆಗೆದುಕೊಳ್ಳುವುದನ್ನು ಸ್ಪಷ್ಟವಾಗಿ ವಿರೋಧಿಸುತ್ತಾರೆ ಎಂದು ಮೌರ್ಯ ಅವರ ಸಹಾಯಕರು ಹೇಳಿದ್ದಾರೆ.
“ಗುತ್ತಿಗೆದಾರರು ಹಣ ಮಾಡಬಾರದು ಎಂದು ಯಾರೊಬ್ಬರು ಈಗ ಹೇಳಲಾರರು. ನಾವು ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಬಯಸುತ್ತಿದ್ದೇವೆ. ರಸ್ತೆ ನಿರ್ಮಾಣದಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಹಣ ಲೂಟಿ ಮಾಡಬಾರದು. ಹಣ ಮಾಡಿ. ಆದರೆ, ಅದು ಹೇಗಿರಬೇಕೆಂದರೆ, ದಾಲ್ ಸಾಂಬಾರ್‌ನಲ್ಲಿರುವ ಉಪ್ಪಿನಂತಿರಬೇಕು. ಆದರೆ, ನೀವು ಸಾರ್ವಜನಿಕ ಹಣ ಲೂಟಿ ಮಾಡಬಹುದು ಎಂದು ಬಯಸಿದರೆ, ಬಿಜೆಪಿ ಸರಕಾರ ಅಂತವರನ್ನು ಸುಮ್ಮನೆ ಬಿಡಲಾರದು” ಎಂದು ಮೌರ್ಯ ಹೇಳಿದ್ದರು.
ಯೋಗಿ ಆದಿತ್ಯನಾಥ್ ಸರಕಾರದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ವೌರ್ಯ ಅವರು ಉಸ್ತುವಾರಿಯಾಗಿ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ.