×
Ad

ಆಧಾರ ರಹಿತ ಆರೋಪವನ್ನು ಸಹಿಸುವುದಿಲ್ಲ: ಪ್ರಮೋದ್

Update: 2017-09-11 23:18 IST

ಮಣಿಪಾಲ, ಸೆ.11: ಜಿಲ್ಲೆಯಲ್ಲಿ ಸಿಆರ್‌ಝಡ್ ಪ್ರದೇಶದಲ್ಲಿ ರಾಷ್ಟ್ರೀಯ ಹಸಿರು ಪೀಠದ ಅನುಮತಿಯೊಂದಿಗೆ ಪುನರಾರಂಭಗೊಳ್ಳುತ್ತಿರುವ ಮರಳುಗಾರಿಕೆಗೆ ಸಂಬಂಧಿಸಿದಂತೆ ತನ್ನ ವಿರುದ್ಧ ಮಾಡಲಾಗುತ್ತಿರುವ ಆಧಾರ ರಹಿತ ಆರೋಪಗಳು ಹಾಗೂ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಜಿಲ್ಲೆಯ ಸಿಆರ್‌ಝಡ್ ಪ್ರದೇಶದಲ್ಲಿ ಮರಳುಗಾರಿಕೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳದ ಬಗ್ಗೆ ವಿಚಾರಿಸಲು ಸೋಮವಾರ ದಿಢೀರನೆ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಚೇರಿಗೆ ಭೇಟಿ ನೀಡಿ ಮರಳುಗಾರಿಕೆ ಸ್ಥಿತಿ-ಗತಿ ಕುರಿತು ಹಿರಿಯ ವಿಜ್ಞಾನಿ ಕೋದಂಡರಾಮಯ್ಯ ಅವರಲ್ಲಿ ವಿಚಾರಿಸುವ ವೇಳೆ ಅವರು ಈ ಎಚ್ಚರಿಕೆ ನೀಡಿದರು.

ಜಿಲ್ಲೆಯ ಬಿಜೆಪಿಯ ನಾಯಕರು ಹಾಗೂ ಮರಳು ಗುತ್ತಿಗೆದಾರರ ಸಂಘದ ಕೆಲವು ಸದಸ್ಯರು ಪತ್ರಿಕೆಗಳಲ್ಲಿ ಈ ಕುರಿತು ಮಾಡುತ್ತಿರುವ ಆರೋಪಗಳು, ತಾನು ಎಂ. ಸ್ಯಾಂಡ್ ಪರವಾಗಿ ಲಾಬಿ ನಡೆಸಲು ಮರಳುಗಾರಿಕೆಯನ್ನು ವಿಳಂಬಗೊಳಿಸುತ್ತಾ ತುಘಲಕ್ ದರ್ಬಾರ್ ನಡೆಸುತ್ತಿರುವುದಾಗಿ ಬಿಂಬಿಸುತ್ತಿ ರುವುದನ್ನು ಪ್ರಶ್ನಿಸಿದ ಅವರು, ಇದರಲ್ಲಿ ತನಗೆ ಯಾವುದೇ ಸ್ವಹಿತಾಸಕ್ತಿ ಇಲ್ಲವೇ ಇಲ್ಲ ಎಂದರು.

ಎಂ.ಸ್ಯಾಂಡ್ ಕುರಿತು ನನಗೇನೂ ಗೊತ್ತಿಲ್ಲ. ನಮ್ಮ ಜಿಲ್ಲೆಯಲ್ಲಿ ಎಂ.ಸ್ಯಾಂಡ್ ಇಲ್ಲವೇ ಇಲ್ಲ. ಜನ ಇಲ್ಲಿ ಅದನ್ನು ಬಳಸುವುದೂ ಇಲ್ಲ. ಇನ್ನು ನಾನು ಆ ಬಗ್ಗೆ ಲಾಬಿ ಮಾಡುವ ಪ್ರಶ್ನೆ ಎಲ್ಲಿದೆ ಎಂದ ಅವರು, ಜಿಲ್ಲೆಯ ಬಡವರಿಗೆ ಕಡಿಮೆ ದರದಲ್ಲಿ ಮರಳು ಸಿಗಬೇಕು ಎಂಬುದಷ್ಟೇ ತಮ್ಮ ಉದ್ದೇಶವಾಗಿದೆ ಎಂದರು.
ತಾವು ಜಿಲ್ಲೆಯ ಜನತೆಯ ಹಿತಕ್ಕಾಗಿ ಮತ್ತು ಪರಿಸರ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿದ್ದು ವೃಥಾ ಆರೋಪಗಳ್ನು ಮಾಡಬೇಡಿ. ಕಾನೂನು ರೀತಿಯಲ್ಲಿ ಪರವಾನಿಗೆ ಪಡೆದು, ರಾಷ್ಟ್ರೀಯ ಹಸಿರು ಪೀಠ ವಿಧಿಸಿದ ಶರತ್ತುಗಳನ್ನು ಚಾಚೂ ತಪ್ಪದೇ ಪಾಲಿಸಿ ಮರಳುಗಾರಿಕೆ ಮಾಡಿ. ಇಲ್ಲದಿದ್ದರೆ ಮತ್ತೆ ಕೋರ್ಟ್ ಹಿಂದಿನಂತೆ ಮರಳುಗಾರಿಕೆಗೆ ತಡೆಯಾಜ್ಞೆ ವಿಧಿಸಬಹುದು ಎಂದರು.

ಇಲಾಖೆ ಇದುವರೆಗೆ ಮರಳುಗಾರಿಕೆಗೆ ನೀಡಿದ ಪರವಾನಿಗೆ ಹಾಗೂ ಜಿಪಿಎಸ್ ಅಳವಡಿಕೆಗೆ ಪಡೆಯುತ್ತಿರುವ ಶುಲ್ಕದ ಕುರಿತಂತೆ ಕೇಳಿಬರುತ್ತಿರುವ ಆರೋಪಗಳ ಕುರಿತು ಜಿಪಿಎಸ್‌ನ ಗುತ್ತಿಗೆದಾರರ ಬಳಿ ಸಮಜಾಯಿಷಿ ಕೇಳಿದರು. ಜಿಲ್ಲೆಯಲ್ಲಿ ಮರಳುಗಾರಿಕೆ ನಡೆಸಲು ಮರಳು ಸಾಗಾಟ ವಾಹನಗಳಿಗೆ ಮತ್ತು ಮರಳು ಎತ್ತುವ ದೋಣಿಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯವಾಗಿದ್ದು,ಇದರ ಟೆಂಡರ್‌ನ್ನು ಬೆಂಗಳೂರು ಮೂಲದ ಟೆಲಿಮ್ಯಾಟಿಕ್ಸ್ ಪಾರ್ ಯು ಸರ್ವಿಸ್ ಪ್ರೈ ಲಿ. ಕಂಪೆನಿ ಬಿಡ್‌ನಲ್ಲಿ ಪಡೆದುಕೊಂಡಿದೆ. ಇದೇ ಕಂಪೆನಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಮರಳುಗಾರಿಕೆ ನಡೆಸಲು ಲಾರಿ ಮತ್ತು ಮರಳು ದೋಣಿಗಳಿಗೆ ಜಿಪಿಎಸ್ ಅಳವಡಿಸಿ ಯಶಸ್ವಿಯಾಗಿದೆ ಎಂದು ಸಚಿವರು ನುಡಿದರು.

ಹಸಿರು ಪೀಠದ ಆದೇಶದಂತೆ ಕರಾವಳಿಯ ಸಿಆರ್‌ಝಡ್ ಪ್ರದೇಶದಲ್ಲಿ ಮರಳುಗಾರಿಕೆ ನಡೆಸಲು ಅವಕಾಶವೇ ಇಲ್ಲ. ಕೇವಲ ಮೀನುಗಾರಿಕಾ ದೋಣಿಗಳ ಚಲನವಲನಕ್ಕೆ ತೊಂದರೆಯಾಗುವ ಮರಳು ದಿಬ್ಬಗಳನ್ನು ತೆರವು ಗೊಳಿಸಲು ಮಾತ್ರ ಅವಕಾಶವಿದೆ. ಇದಕ್ಕೆ ಸುರತ್ಕಲ್ ಎನ್‌ಐಟಿಕೆ ತಜ್ಞರು ಸ್ಥಳ ಪರಿಶೀಲನೆ ನಡೆಸಿ ಮರಳು ತೆರವುಗೊಳಿಸುವ ಜಾಗವನ್ನು ಗುರುತಿಸಬೇಕಿದೆ. ಆ ಪ್ರದೇಶದಲ್ಲಿ ಮಾತ್ರ ಮರಳು ತೆಗೆಯಲು ಅವಕಾಶವಿದೆ. ಇದನ್ನೆಲ್ಲಾ ಜಿಪಿಎಸ್ ಮೂಲಕ ನಿಯಂತ್ರಿಸಲು ಸಾಧ್ಯವಿದೆ ಎಂದು ಟೆಲಿಮ್ಯಾಟಿಕ್ಸ್‌ನ ಯೋಜನಾ ನಿರ್ವಾಹಕ ಸಂಪತ್ ಶೆಟ್ಟಿ ವಿವರಿಸಿದರು.

ಆದರೆ ಇಲ್ಲಿ ಕೆಲವರು 3,000 ರೂ.ಗೆ ಜಿಪಿಎಸ್ ಅಳವಡಿಸಲು ಸಾಧ್ಯವಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತಿದ್ದಾರೆ. ಈ ದರಕ್ಕೆ ಜಿಪಿಎಸ್ ಅಳವಡಿಕೆ ಸಾಧ್ಯವಿದ್ದರೆ ಅವರು ಯಾಕೆ ಟೆಂಡರ್‌ನಲ್ಲಿ ಬಿಡ್ ಮಾಡಲಿಲ್ಲ ಎಂದು ಪ್ರಮೋದ್ ಖಾರವಾಗಿ ಪ್ರಶ್ನಿಸಿದರು. ಜಿಪಿಎಸ್‌ಗೆ ಟೆಂಡರ್ ಕರೆದು, ಕಡಿಮೆ ದರ ಉಲ್ಲೇಖಿಸಿದವರಿಗೆ ಪಾರದರ್ಶಕವಾಗಿಯೇ ನೀಡಲಾಗಿದೆ. ಇದರಲ್ಲೂ ತಾಂತ್ರಿಕ ಪರಿಣಿತಿಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.

ಟೆಂಡರ್‌ನಲ್ಲಿ ಗುತ್ತಿಗೆ ಪಡೆದವರು (ಟೆಲಿಮ್ಯಾಟಿಕ್ಸ್) ಲಾರಿ ಹಾಗೂ ದೋಣಿಗಳಲ್ಲಿ ಜಿಪಿಎಸ್ ಅಳವಡಿಕೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಕೊಡಬೇಕಾಗಿದೆ. ಅಲ್ಲದೇ ಇವರು ಗಣಿ ಮತ್ತು ಭೂವಿಜ್ಞಾನ ಕಚೇರಿಯಿಂದಲೇ ಇವುಗಳನ್ನು ನಿರ್ವಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಹಸಿರು ಪೀಠ ಜಿಲ್ಲೆಯ ಮರಳುಗಾರಿಕೆ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ನಾವು ಸಹ ಎಲ್ಲಾ ನಿರ್ಧಾರಗಳನ್ನು ಸೂಕ್ಷವಾಗಿ ಪರಿಶೀಲಿಸಿ ತೆಗೆದುಕೊಳ್ಳಬೇಕು. ಅಲ್ಲದೇ ಯಾರು ಮರಳುಗಾರಿಕೆ ಮಾಡಲು ನಿಜವಾಗಿಯೂ ಉತ್ಸುಕರಾಗಿದ್ದಾರೋ ಅವರಿಗೆ ಆದ್ಯತೆ ನೀಡಬೇಕು. ಪರವಾನಿಗೆ ಪಡೆದು ವಿಳಂಬ ನೀತಿ ಅನುಸರಿಸಿದರೆ, ಅವರನ್ನು ಬದಲಿಸಿ ಎಂದು ಸಚಿವರು ಸ್ಪಷ್ಟವಾದ ನಿರ್ದೇಶನ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವನಾಗಿ ಮರಳುಗಾರಿಕೆಗೆ ಪರವಾನಿಗೆ ನೀಡುವಾಗ ಕೇವಲ ಜಿಲ್ಲೆಯ ಮರಳು ಬೇರೆ ಜಿಲ್ಲೆಗೆ ಹೋಗದೇ, ಜಿಲ್ಲೆಯ ಜನರ ಅಗತ್ಯಗಳಿಗೆ ಮಾತ್ರ ಬಳಕೆಯಾಗಬೇಕು ಎಂದು ನಿರ್ದೇಶನ ನೀಡಿದ್ದು ಬಿಟ್ಟರೆ ತಾನು ಬೇರೆ ಯಾವ ರೀತಿಯ ಹಸ್ತಕ್ಷೇಪವನ್ನೂ ಮಾಡಿಲ್ಲ. ಇನ್ನುಳಿದ ಎಲ್ಲಾ ನಿರ್ಧಾರಗಳನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಮರಳು ಸಮಿತಿಯೇ ತೆಗೆದುಕೊಂಡಿದೆ. ಸುಮಾಸುಮ್ಮನೆ ಆರೋಪ ಮಾಡುವವರು ಇದನ್ನು ತಿಳಿದು ಕೊಳ್ಳಬೇಕು. ಕೆಲವರಿಗೆ ಈಗ ಆರಂಭಗೊಂಡಿರುವ ಮರಳುಗಾರಿಕೆಯನ್ನು ಕೋರ್ಟಿನ ಮೂಲಕ ನಿಲ್ಲಿಸುವ ಇರಾದೆ ಇರುವ ಸಂಶಯವಿದೆ. ಇದಕ್ಕಾಗಿ ಷಡ್ಯಂತ್ರಗಳನ್ನು ಹೂುತಿದ್ದಾರೆ ಎಂದವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News