×
Ad

ರಾ.ಹೆದ್ದಾರಿ ಪ್ರಾಧಿಕಾರದ ಅಧಿಕಾರಗಳ ಬೇಜವಾಬ್ದಾರಿತನ

Update: 2017-09-11 23:21 IST

ಮಣಿಪಾಲ, ಸೆ.11: ಸುಧೀರ್ಘ ಕಾಲದಿಂದ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾಮಗಾರಿ ಕುರಿತು ಚರ್ಚಿಸಲು ಇಂದು ಕರೆಯಲಾಗಿದ್ದ ಉಡುಪಿ ಜಿಪಂನ ವಿಶೇಷ ಸಾಮಾನ್ಯ ಸಭೆ, ಉಪಸ್ಥಿತರಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಬೇಜವಾಬ್ದಾರಿತನದ ವರ್ತನೆಯಿಂದ ನಡೆಯದೇ ಅರ್ಧದಲ್ಲೇ ಮೊಟಕುಗೊಂಡಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಪಂ ಅಧ್ಯಕ್ಷ ದಿನಕರ ಬಾಬು ಅವರು ಸಭೆಯನ್ನು ಮುಂದೂಡಿದರು. ಸದಸ್ಯರ ಪ್ರಶ್ನೆ, ಸಂಶಯ, ದೂರುಗಳಿಗೆ ಸ್ಪಂಧಿಸಿ ಉತ್ತರ ನೀಡಬೇಕಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕುಂದಾಪುರ- ಸುರತ್ಕಲ್- ತಲಪಾಡಿ ಯೋಜನೆಯ ಯೋಜನಾ ನಿರ್ದೇಶಕ ವಿಜಯಕುಮಾರ್ ಅವರು ಮಾತನಾಡಿದ ಸದಸ್ಯರು ಕೇಳಿದ ಪ್ರಶ್ನೆಗಳು ನನಗೆ ಅರ್ಥವಾಗಿಲ್ಲ. ನನಗೆ ಕನ್ನಡ ಬರುವುದಿಲ್ಲ ಎಂದು ಹೇಳಿ ಉಡಾಫೆಯಾಗಿ ಮಾತನಾಡಿದ್ದರಿಂದ ಆಕ್ರೋಶಗೊಂಡ ಸದಸ್ಯರು ಕೊನೆಗೆ ಸೂಕ್ತ ಸಿದ್ಧತೆಗಳೊಂದಿಗೆ ಕನ್ನಡ ಬಲ್ಲ ಅಧಿಕಾರಿಗಳನ್ನು ಕರೆತರುವಂತೆ ತಿಳಿಸಿ ಸಭೆುನ್ನು ಮುಂದೂಡಲು ನಿರ್ಧರಿಸಿದರು.

ಸಭೆ ಪ್ರಾರಂಭಗೊಂಡ ಕೆಲ ಹೊತ್ತು ಸಭೆ ಪ್ರಾರಂಭಕ್ಕೆ ಕೋರಂ ಇಲ್ಲದ ಸಮಸ್ಯೆ ಎದುರಾಯಿತು.ರಾ.ಹೆದ್ದಾರಿ ಸಮಸ್ಯೆ ಕುರಿತು ಚರ್ಚೆಗೆ ಸೀಮಿತವಾದ ಈ ಸಭೆ ಎಲ್ಲಾ ಸದಸ್ಯರಿಗೂ ಅಗತ್ಯವಿಲ್ಲದ ಕಾರಣ ಚರ್ಚೆ ಪ್ರಾರಂಭಿಸಬಹುದು ಎಂದು ಕಾಂಗ್ರೆಸ್‌ನ ಜನಾರ್ದನ ತೋನ್ಸೆ, ಬಿಜೆಪಿಯ ಬಾಬು ಶೆಟ್ಟಿ, ರಾಘವೇಂದ್ರ ಕಾಂಚನ್ ನುಡಿದರು.

ಕೊನೆಗೆ ಸಿಇಒ ಶಿವಾನಂದ ಕಾಪಸಿ ಚರ್ಚೆ ಆರಂಭಿಸಲು ತಿಳಿಸಿದರು. ಮೊದಲು ಮಾತನಾಡಿದ ತೋನ್ಸೆ, ಅಂಬಲಪಾಡಿ, ಕರಾವಳಿ ಬೈಪಾಸ್ ಹಾಗೂ ಸಂತೆಕಟ್ಟೆಯಲ್ಲಿ ಎದುರಾಗಿರುವ ಸಮಸ್ಯೆಯ ಕುರಿತು ಹಲವು ಪ್ರಶ್ನೆ ಎತ್ತಿದರು. ಉಪ್ಪೂರಿನಲ್ಲಿ ರಾಜಕಾಲುವೆ ಮುಚ್ಚಿರುವುದರಿಂದ ಅಲ್ಲಿನ ಗದ್ದೆಗಳಲ್ಲಿ ಕೃಷಿಗೆ ತೊಂದರೆಯಾಗಿರುವುದರತ್ತ ಬೊಟ್ಟು ಮಾಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ಮಾತನಾಡಿ, ಮಾಬುಕಳದಿಂದ ಕೋಟೇಶ್ವರದವರೆಗೆ ಸರ್ವಿಸ್ ರಸ್ತೆ ಇಲ್ಲದ ಬಗ್ಗೆ ಗಮನ ಸೆಳೆದರು. ಆದರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ನಿಂತ ಅಧಿಕಾರಿ ನೀವು ಹೇಳಿರುವುದು ನನಗೆ ಗೊತ್ತಾಗಿಲ್ಲ, ಇಂಗ್ಲೀಷ್ ಇಲ್ಲ ಹಿಂದಿಯಲ್ಲಿ ಹೇಳುವಂತೆ ತಿಳಿಸಿದರು.

ಇದರಿಂದ ಆಕ್ರೋಶಗೊಂಡ ಸದಸ್ಯರು, ಜಿಪಂ ಸಭೆಗೆ ಬರುವಾಗ ಕನ್ನಡ ಭಾಷಾಂತರಕಾರರನ್ನು ಕರೆತರಬೇಕಿತ್ತು. ಅಥವಾ ಕನ್ನಡ ಬಲ್ಲ ಎನ್‌ಎಚ್‌ನ ರಾಜ್ಯ ಪ್ರತಿನಿಧಿ ಇಂಜಿನಿಯರ್‌ರನ್ನು ಕರೆತರಬೇಕಿತ್ತು ಎಂದು ನುಡಿದರು. ಬಹು ಹೊತ್ತು ಈ ಬಗ್ಗೆ ಚರ್ಚೆ ನಡೆದು ಕೊನೆಗೆ ಸಭೆಯನ್ನು ಮುಂದೂಡಲು ನಿರ್ಧರಿಸಲಾಯಿತು.

ಸಭೆಯಲ್ಲಿ ಸಿಇಒ ಶಿವಾನಂದ ಕಾಪಸಿ, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

ಅಧಿಕಾರಿಗಳ ಬಗ್ಗೆ ಅಧ್ಯಕ್ಷರಿಗೆ ಬೇಸರ
ಇತ್ತೀಚೆಗೆ ನಡೆಯುತ್ತಿರುವ ಎಲ್ಲಾ ಸಭೆಗಳಲ್ಲಿ ಪ್ರಮುಖ ಇಲಾಖಾ ಅಧಿಕಾರಿಗಳು ಜಿಪಂ ಸಭೆಗಳಲ್ಲಿ ಸಮರ್ಪಕ ಮಾಹಿತಿಯಾಗಲಿ, ಅಭಿವೃದ್ಧಿ ಕಾಮಗಾರಿಗೆ,ಯೋಜನೆಗೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಒದಗಿಸುತ್ತಿಲ್ಲ ಎಂದು ಜಿಪಂ ಅಧ್ಯಕ್ಷ ದಿನಕ ಬಾಬು ಬೇಸರ ವ್ಯಕ್ತಪಡಿಸಿದ್ದಾರೆ.
ಸೋಮವಾರ ಜಿಪಂ ವಿಶೇಷ ಸಾಮಾನ್ಯಸಭೆ ಮೊಟಕುಗೊಂಡ ಬಳಿಕ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಾಮಾನ್ಯ ಸಭೆ ಯಾಗಲಿ, ಕೆಡಿಪಿ ಸಭೆಯಲ್ಲಾಗಲಿ ಎನಾದರೂ ಮಾಹಿತಿ ಕೇಳಿದರೆ ಒಬ್ಬರೂ ಸರಿಯಾಗಿಉತ್ತರಿಸುವುದಿಲ್ಲ. ಕೆಲವು ಅಧಿಕಾರಿಗಳು ಸಭೆಗೆ ಹಾಜರಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ರೀತಿಯಾದರೆ ಅಭಿವೃದ್ಧಿ ಯೋಜನೆಗಳನ್ನು ನಡೆಸುವುದಾದರು ಹೇಗೆ ಎಂದು ಪ್ರಶ್ನಿಸಿದ ದಿನಕರಬಾಬು, ಇದು ಹೀಗೆ ಮುಂದುವರಿದರೆ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಮೊಟಕುಗೊಂಡ ವಿಶೇಷ ಸಾಮಾನ್ಯಸಭೆಯನ್ನು ಮುಂದಿನ ವಾರ ಮತ್ತೆ ಕರೆಯಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News