×
Ad

ಲೇಡಿಗೊಶನ್ ಆಸ್ಪತ್ರೆಯ ಪರಿಕರ ಖರೀದಿಗೆ ಎಂಆರ್‌ಪಿಎಲ್‌ನಿಂದ 1.50 ಕೋಟಿ ರೂ. ಹೆಚ್ಚುವರಿ ಕೊಡುಗೆ

Update: 2017-09-11 23:23 IST

ಮಂಗಳೂರು, ಸೆ.11: ಲೇಡಿಗೊಶನ್ ಆಸ್ಪತ್ರೆಯ ರೋಗಿಗಳ ಬಳಕೆಗೆ ಪರಿಕರಗಳ ಖರೀದಿಗೆ ಎಂಆರ್‌ಪಿಎಲ್ ವತಿಯಿಂದ ಹೆಚ್ಚುವರಿಯಾಗಿ ಒಂದೂವರೆ ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಎಂಆರ್‌ಪಿಎಲ್‌ನ ಆಡಳಿತ ನಿರ್ದೇಶಕ ಎಚ್. ಕುಮಾರ್ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಲೇಡಿಗೋಶನ್ ಆಸ್ಪತ್ರೆಯ ಹಳೆಯ ಕಟ್ಟಡವನ್ನು ಕೆಡವಿ ನಿರ್ಮಾಣಗೊಂಡಿರುವ ನೂತನ ಆಸ್ಪತ್ರೆಯ ಸಂಕೀರ್ಣದ ಕಾಮಗಾರಿ ಶೇ 90 ಭಾಗ ಪೂರ್ಣಗೊಂಡಿದೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಒಎನ್.ಜಿ.ಸಿಯ ಸಹಸಂಸ್ಥೆಯಾದ ಎಂಆರ್‌ಪಿಎಲ್‌ನ ಸಿಎಸ್‌ಆರ್ ನಿಧಿಯಿಂದ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ 23.2 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದು ಎಚ್.ಕುಮಾರ್ ತಿಳಿಸಿದ್ದಾರೆ.

ಎಂಆರ್‌ಪಿಎಲ್ ನಿಂದ ಹೆಚ್ಚುವರಿ ದೇಣಿಗೆ:- ಕಳೆದ ಐದು ವರ್ಷಗಳಿಂದ ನಿಧಾನಗತಿಯಲ್ಲಿ ನಡೆಯುತ್ತಿರುವ ಕಾಮಗಾರಿ ಎಂಆರ್‌ಪಿಎಲ್‌ನ ದೇಣಿಗೆಯ ಮೊತ್ತ ಬಿಡುಗಡೆಯಾಗಿ ಶೇ 90ರಷ್ಟು ಕಾಮಗಾರಿ ಪೂರ್ಣಗೊಳ್ಳಲು ಕಾರಣವಾಯಿತು. ಆದರೆ ಆಸ್ಪತ್ರೆಯ ಬೆಡ್ ಹಾಗೂ ಇತರ ಸಲಕರಣೆಗಳು ತುಂಬಾ ಹಳೆಯದಾಗಿರುವ ಕಾರಣ ನೂತನ ಕಟ್ಟಡದೊಂದಿಗೆ ನವೀಕರಣಗೊಂಡ ಆಸ್ಪತ್ರೆಗೆ ನೂತನ ಸಲಕರಣೆ ಖರೀದಿಗೆ ಹೆಚ್ಚುವರಿಯಾಗಿ 1.90 ಕೋಟಿ ರೂ ಅನುದಾನವನ್ನು ಕೋರಲಾಗಿದೆ. ಎಂಆರ್‌ಪಿಎಲ್‌ನಿಂದ ಈ ಹಿನ್ನೆಲೆಯಲ್ಲಿ 1.50 ಕೋಟಿ ರೂ ಹೆಚ್ಚುವರಿ ಅನುದಾನ ನೀಡಲು ಒಪ್ಪಿಗೆ ನೀಡಿದೆ. ಇದಲ್ಲದೆ ಎಂಆರ್‌ಪಿಎಲ್ ದಕ್ಷಿಣ ಕನ್ನಡದ ಸರಕಾರಿ ಕಾಲೇಜುಗಳು, ಸಂಸ್ಥೆಗಳ ಬಳಿ ಶೌಚಾಲಯ ನಿರ್ಮಾಣಕ್ಕೂ ಅನುದಾನ ಬಿಡುಗಡೆಮಾಡಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ವೇಣೂರು ಕಾಲೇಜಿನಲ್ಲಿ ವಿಜ್ಞಾನ ಲ್ಯಾಬ್ ನಿರ್ಮಾಣಕ್ಕೆ ಅನುದಾನ, ಆದರ್ಶ ಗ್ರಾಮ ಬಳ್ಪದಲ್ಲಿ ಹೈಸ್ಕೂಲ್ ಕಟ್ಟಡ ನಿರ್ಮಾಣಕ್ಕೆ ಅನುದಾನ, ಪುತ್ತೂರು ಬ್ಲಡ್ ಬ್ಯಾಂಕ್‌ನ ನೂತನ ಯೋಜನೆಗೆ 25 ಲಕ್ಷ ರೂ ಅನುದಾನ ನೀಡಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಸುದ್ದಿಗೊಷ್ಠಿಯಲ್ಲಿ ಲೇಡಿಗೊಶನ್‌ನ ಪ್ರಭಾರ ಅಧೀಕ್ಷಕಿ ಡಾ.ಶಕುಂತಳಾ,ಸ್ಥಾನೀಯ ವೈದ್ಯಾಧಿಕಾರಿ ಡಾ.ದುರ್ಗಾಪ್ರಸಾದ್,ಎಂಆರ್‌ಪಿಎಲ್‌ನ ಅಧಿಕಾರಿ ಬಿಎಚ್.ವಿ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News