ಕಾರಿನ ಟಯರ್ ಸ್ಫೋಟ: ಅಪಾಯದಿಂದ ಪಾರಾದ ರೈನಾ
ಲಕ್ನೋ, ಸೆ.12: ಭಾರತದ ಕ್ರಿಕೆಟಿಗ ಸುರೇಶ್ ರೈನಾ ಪ್ರಯಾಣಿಸುತ್ತಿದ್ದ ಕಾರಿನ ಚಕ್ರ ಸ್ಫೋಟಗೊಂಡಿರುವ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದ್ದು, ರೈನಾ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ದುಲೀಪ್ ಟ್ರೋಫಿ ಪಂದ್ಯದಲ್ಲಿ ಭಾಗವಹಿಸಲು ರೈನಾ ತಮ್ಮ ರೇಂಜ್‌ರೋವರ್ ಕಾರಿನಲ್ಲಿ ಮಂಗಳವಾರ ತಡರಾತ್ರಿ ಗಾಝಿಯಾಬಾದ್‌ನಿಂದ ಕಾನ್ಪುರಕ್ಕೆ ಪ್ರಯಾಣಿಸುತ್ತಿದ್ದಾಗ ಇಟಾವ ಸಮೀಪ ಕಾರಿನ ಟಯರ್ ಸ್ಫೋಟಗೊಂಡಿದೆ. ಘಟನೆಯ ವೇಳೆ ಕಾರು ಅತ್ಯಂತ ವೇಗವಾಗಿ ಚಲಿಸುತ್ತಿತ್ತು. ರೈನಾ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಇಂಡಿಯಾ ಬ್ಲೂ ತಂಡದ ನಾಯಕನಾಗಿರುವ ರೈನಾ ಕಾನ್ಪುರದ ಗ್ರೀನ್‌ಪಾರ್ಕ್‌ನಲ್ಲಿ ಬ್ಲೂ ತಂಡವನ್ನು ಮುನ್ನಡೆಸಲಿದ್ದಾರೆ. ರೈನಾ ಪ್ರಯಾಣಿಸುತ್ತಿದ್ದ ಕಾರಿನ ಟಯರ್ ಸ್ಫೋಟಗೊಂಡ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ರೈನಾಗೆ ಬೇರೊಂದು ವಾಹನದ ವ್ಯವಸ್ಥೆ ಮಾಡಿಕೊಟ್ಟರು.