ಉನ್ನತ ಮಟ್ಟದ ತನಿಖೆಗೆ ಗೃಹ ಸಚಿವರ ಒಪ್ಪಿಗೆ: ಸಚಿವ ಖಾದರ್
ಮಂಗಳೂರು, ಸೆ. 12: ವಾರ್ತಾಭಾರತಿ ಪತ್ರಿಕೆಯ ವರದಿಗಾರನಿಗೆ ನೋಟಿಸ್ ಜಾರಿ ಮಾಡದೇ ಜೈಲಿಗೆ ಕಳುಹಿಸಿದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರು ಒಪ್ಪಿಗೆ ನೀಡಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಗೃಹಸಚಿವರ ಜತೆ ಈ ಬಗ್ಗೆ ಚರ್ಚೆ ಮಾಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಪರಸ್ಪರ ಆರೋಪ- ಪ್ರತ್ಯಾರೋಪ ಇದ್ದಾಗ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಸಚಿವರಲ್ಲಿ ಮನವಿ ಮಾಡಿದ್ದು, ಅವರು ಅದಕ್ಕೆ ಒಪ್ಪಿಗೆ ನೀಡಿದ್ದಾರೆ.
ಪವಿತ್ರ ಗ್ರಂಥಕ್ಕೆ ಅವಮಾನ ಮಾಡಿರುವುದು ತಪ್ಪು. ಇದು ಇಲಾಖೆಯಿಂದ ನಡೆದಿದೆಯಾ ಎನ್ನುವ ಕುರಿತು ಸಂಬಂಧಪಟ್ಟ ಮನೆಯವರು, ಇಲಾಖೆ ಹಾಗೂ ಆರೋಪ ಮಾಡುವವರು ಹೇಳಬೇಕು. ಇದಕ್ಕಾಗಿ ಉನ್ನತ ಮಟ್ಟದ ತನಿಖೆ ಹೊರಗಿನ ಉನ್ನತ ಮಟ್ಟದ ಅಧಿಕಾರಿಗಳಿಂದ ನಡೆಯಬೇಕು ಎಂದು ಗೃಹ ಸಚಿವರಿಗೆ ಮನವಿ ಮಾಡಿದ್ದಾಗಿ ಸಚಿವ ಯು.ಟಿ.ಖಾದರ್ ತಿಳಿಸಿದರು.
ಮಾಧ್ಯಮಗಳಿಗೆ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕಿದೆ. ಪೊಲೀಸರ ಹೇಳಿಕೆಯಂತೆ ಒಂದು ವೇಳೆ ವರದಿಗಾರನಿಂದ ತಪ್ಪು ಆಗಿದ್ದರೂ ನೋಟಿಸು ನೀಡಿ ವಿಚಾರಣೆ ನಡೆಸುವ ಬದಲು ತರಾತುರಿಯಲ್ಲಿ, ನಗರದಲ್ಲಿ ಮಂಗಳೂರು ಚಲೋನಂತಹ ಕಾರ್ಯಕ್ರಮ ಆಯೋಜಿಸಿದ್ದ ಸಂದರ್ಭದಲ್ಲಿ ಬಂಧಿಸಿ ಜೈಲಿನಲ್ಲಿ ಇರಿಸುವಂತಹ ಕ್ರಮವನ್ನು ಯಾಕಾಗಿ ಕೈಗೊಳ್ಳಲಾಗಿದೆ ಎಂಬ ಬಗ್ಗೆಯೂ ತನಿಖೆಯಾಗಬೇಕು ಎಂದು ಸಚಿವ ಖಾದರ್ ಹೇಳಿದರು.
ಘಟನೆಯ ಕುರಿತು ವರದಿ ಮಾಡುವಾಗ ವರದಿಗಾರನನ್ನು ಕೂಡ ಸಾಕ್ಷಿಧಾರನನ್ನಾಗಿ ಮಾಡಿ ನ್ಯಾಯಾಲಯಕ್ಕೆ ಕರೆಸಿಕೊಳ್ಳುವ ಕುರಿತು ವರದಿಗಾರರು ಎತ್ತಿದ ಪ್ರಶ್ನೆಗೆ ಸಚಿವರು ಇಂತಹ ಘಟನೆಗಳ ಕುರಿತು ಮಾಹಿತಿ ಇಲ್ಲ. ಗೃಹ ಸಚಿವರಿಗೆ ಈ ಕುರಿತು ಮಾಹಿತಿ ನೀಡುವುದಾಗಿ ಸಚಿವ ಖಾದರ್ ತಿಳಿಸಿದರು.