ಕಾಸರಗೋಡು: ಮಣ್ಣು ಕುಸಿದು ಓರ್ವ ಕಾರ್ಮಿಕ ಮೃತ್ಯು
Update: 2017-09-12 19:27 IST
ಕಾಸರಗೋಡು, ಸೆ. 12: ಮಣ್ಣು ಕುಸಿದು ಓರ್ವ ಕಾರ್ಮಿಕ ಮೃತಪಟ್ಟು, ಮೂವರು ಅಪಾಯದಿಂದ ಪಾರಾದ ಘಟನೆ ಇಂದು ಮಧ್ಯಾಹ್ನ ಕುಂಬಳೆ ಸೀತಾಂಗೋಳಿ ಸಮೀಪದ ಕುದ್ರೆಪ್ಪಾಡಿಯಲ್ಲಿ ನಡೆದಿದೆ.
ಮೃತರನ್ನು ಕುದ್ರೆಪ್ಪಾಡಿಯ ವೆಂಕಟರಾಜ್ (60) ಎಂದು ಗುರುತಿಸಲಾಗಿದೆ. ಕುದ್ರೆಪ್ಪಾಡಿ ದೇವಸ್ಥಾನ ರಸ್ತೆ ಸಮೀಪ ವ್ಯಕ್ತಿಯೋರ್ವರಿಗೆ ಮನೆ ನಿರ್ಮಿಸಲು ಸಮತಟ್ಟುಗೊಳಿಸುತ್ತಿದ್ದ ವೇಳೆ ಮಣ್ಣು ಕುಸಿದು ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದ್ದು, ಮಣ್ಣಿನಡಿಯಲ್ಲಿ ಸಿಲುಕಿದ್ದ ವೆಂಕಟರಾಜ್ ರನ್ನು ಹೊರತೆಗೆದು ಕಾಸರಗೋಡು ಖಾಸಗಿ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದುಬಂದಿದೆ.
ಗೋಪಾಲ, ಸೀತಾರಾಮ, ನಾಗಪ್ಪ ಎಂಬವರು ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.