ಹುಲಿವೇಷಕ್ಕಾಗಿ 6 ಲಕ್ಷ ರೂ. ಮೊತ್ತದ ನೋಟಿನ ಮಾಲೆಗಳು ಸಿದ್ಧ!
ಉಡುಪಿ, ಸೆ.12: ಪ್ರತಿವರ್ಷದಂತೆ ಈ ವರ್ಷವೂ ಶಿರೂರು ಮಠಾಧೀಶ ಶ್ರೀಲಕ್ಷ್ಮಿವರತೀರ್ಥ ಸ್ವಾಮೀಜಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಹುಲಿವೇಷಧಾರಿಗಳಿಗೆ ಹಾಕಲು ಆರು ಲಕ್ಷ ರೂ. ಮೊತ್ತದ ನೋಟಿನ ಮಾಲೆಗಳನ್ನು ಸಿದ್ಧ ಪಡಿಸಿದ್ದಾರೆ.
ಉಡುಪಿ ಶಿರೂರು ಮಠದ ಹಿಂಬದಿಯ ಕಟ್ಟಡದ ಮಹಡಿಯಲ್ಲಿ ಇಂದು ನೋಟುಗಳ ಹಾರವನ್ನು ತಯಾರಿಸುವ ಕಾರ್ಯ ನಡೆಸಲಾಯಿತು. 6 ಲಕ್ಷ ರೂ. ಮೊತ್ತದ ಒಟ್ಟು 800 ಮಾಲೆಗಳನ್ನು ರಚಿಸಲಾಗಿದೆ. ಇದರಲ್ಲಿ 50 ರೂ. ಮುಖಬೆಲೆಯ ನೋಟಿನ ಮಾಲೆಯಲ್ಲಿ ಒಟ್ಟು 500 ರೂ. ಮತ್ತು 100 ರೂ. ಮುಖಬೆಲೆಯ ನೋಟಿನ ಮಾಲೆಯಲ್ಲಿ ಒಟ್ಟು 1000 ರೂ.ಗಳಿವೆ.
‘ತುಳುನಾಡಿನ ಜಾನಪದ ಹುಲಿವೇಷ ತಂಡಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿವರ್ಷ ನೋಟಿನ ಹಾರಗಳನ್ನು ತಯಾರಿಸಲಾಗುತ್ತದೆ. ಇದನ್ನು ವಿಟ್ಲಪಿಂಡಿಯ ದಿನ ರಾಜಾಂಗಣ ಕಾರ್ ಪಾರ್ಕಿಂಗ್ ಬಳಿ ನಿರ್ಮಿಸಲಾಗುವ ವೇದಿಕೆಯಲ್ಲಿ ಪ್ರದರ್ಶನ ನೀಡುವ ಹುಲಿವೇಷ ತಂಡಗಳಿಗೆ ಹಾಕಲಾಗುವುದು. ಉಳಿದ ನೋಟಿನ ಮಾಲೆಗಳನ್ನು ಗಣೇಶ ಚತುರ್ಥಿ ಹಾಗೂ ನವರಾತ್ರಿಯ ಹುಲಿವೇಷ ತಂಡಗಳಿಗೆ ಹಾಕಲಾಗುತ್ತದೆ’ ಎಂದು ಶಿರೂರು ಶ್ರೀ ಲಕ್ಷ್ಮಿವರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.