ಸೆ. 16-19: ನಾಗರಾಜ್‌ರಿಂದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
ಉಡುಪಿ, ಸೆ.12: ರಜತ ವರ್ಷ ಸಂಭ್ರಮದಲ್ಲಿರುವ ಉಡುಪಿಯ ಆರ್ಟಿಸ್ಟ್ ಫೋರಂನ ಆಶ್ರಯದಲ್ಲಿ ಸಂಸ್ಥೆಯ ಸದಸ್ಯರಾದ ಉತ್ತರ ಕನ್ನಡದ ಖ್ಯಾತ ಕಲಾವಿದ ನಾಗರಾಜ ಹನೆಹಳ್ಳಿ ಅವರ ಏಕವ್ಯಕ್ತಿ ಕಲಾ ಪ್ರದರ್ಶನವೊಂದು ಸೆ.16ರಿಂದ 19ರವರೆಗೆ ಉಡುಪಿಯ ಗ್ಯಾಲರಿ ದೃಷ್ಟಿಯಲ್ಲಿ ನಡೆಯಲಿದೆ.
ಉಡುಪಿ ಆರ್ಟಿಸ್ಟ್ ಪೋರಂನ ಅಧ್ಯಕ್ಷ ಕಲಾವಿದ ರಮೇಶ್ ರಾವ್ ಅವರು ಮಂಗಳವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಚಿತ್ರಕಲಾ ಪ್ರದರ್ಶನ ಸೆ.16ರ ಸಂಜೆ 4:30ಕ್ಕೆ ಖ್ಯಾತ ಸಾಹಿತಿ, ಕವಿ ಜಯಂತ ಕಾಯ್ಕಿಣಿ ಅವರಿಂದ ಉದ್ಘಾಟನೆಗೊಳ್ಳಲಿದ್ದು, 19ರವರೆಗೆ ಬೆಳಗ್ಗೆ 10 ರಿಂದ ಸಂಜೆ 7 ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತದೆ ಎಂದು ರಮೇಶ್ ರಾವ್ ತಿಳಿಸಿದರು.
ನಾಗರಾಜ ಹನೆಹಳ್ಳಿ ಅವರು ಅಕ್ರಲಿಕ್ ಹಾಗೂ ಮನೋ ಕ್ರಮಾಟಿಕ್‌ನಲ್ಲಿ ರಚಿಸಿದ ಒಟ್ಟು 40 ಕೃತಿಗಳ ಪ್ರದರ್ಶನ ಇಲ್ಲಿ ನಡೆಯಲಿದೆ. ‘ಫಿಮೆ ಎಲಿಗೆಂಟ’ ಶೀರ್ಷಿಕೆಯಡಿ ನಡೆಯುವ ಈ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ನಾಡೋಜ ಕೆ.ಪಿ.ರಾವ್, ಬೆಂಗಳೂರಿನ ಬಬಿತ ಮಧ್ವರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಮೇಶ್ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಹನೆಹಳ್ಳಿಯ ನಾಗರಾಜ್ ಅವರು ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವೀಧರರು. ಅವರು ಧಾರವಾಡದ ಹಾಲಬಾವಿ ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಪದವಿಯನ್ನು, ಮೈಸೂರಿನಲ್ಲಿ ಸ್ನಾತಕ ಪದವಿಯನ್ನು ಪಡೆ ದಿದ್ದು ಈವರೆಗೆ ಮೂರು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ನಡೆಸಿದ್ದಾರೆ. ಅನೇಕ ಕಲಾ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕಲಾವಿದ ನಾಗರಾಜ ಹನೆಹಳ್ಳಿ ಉಪಸ್ಥಿತರಿದ್ದರು.