×
Ad

ಎಂಐಟಿ ವಿದ್ಯಾರ್ಥಿಗಳಿಂದ ಸೌರಶಕ್ತಿ ಚಾಲಿತ ಕಾರು

Update: 2017-09-12 20:16 IST

ಉಡುಪಿ, ಸೆ.12: ಮಣಿಪಾಲದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳು ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಸೌರಶಕ್ತಿಯಿಂದ ಚಲಿಸುವ ಕಾರೊಂದು ನಿರ್ಮಿಸಿದ್ದು, ‘ಎಸ್‌ಎಂ-ಎಸ್1’ ಹೆಸರಿನ ಈ ಕಾರನ್ನು ಸೆ.14ರಂದು ಅನಾವರಣಗೊಳಿಸಲಾಗುವುದು ಎಂದು ಎಂಐಟಿಯ ನಿರ್ದೇಶಕ ಹಾಗೂ ಮಣಿಪಾಲ ವಿವಿಯ ಪ್ರೊ ವೈಸ್ ಚಾನ್ಸಲರ್ ಡಾ.ಜಿ.ಕೆ.ಪ್ರಭು ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಐಟಿಯ ವಜ್ರ ಮಹೋತ್ಸವ ಹಾಗೂ ಸೆ.15ರಂದು ನಡೆಯುವ ಇಂಜಿನಿಯರ್ಸ್ ಡೇಗೆ ಪೂರ್ವಭಾವಿಯಾಗಿ ಈ ಕಾರನ್ನು ಸೆ.14ರಂದು ಬೆಳಗ್ಗೆ 10 ಕ್ಕೆ ಅನಾವರಣಗೊಳಿಸಲಾಗುತ್ತದೆ ಎಂದರು.

ಮಣಿಪಾಲ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅವರು ಕಾರನ್ನು ಉದ್ಘಾಟಿಸಲಿದ್ದು, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಎಂ.ಪಾಟೀಲ್ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ. ಪ್ರೊ.ಜಿ.ಕೆ.ಪ್ರಭು ಅಧ್ಯಕ್ಷತೆ ವಹಿಸಲಿದ್ದಾರೆ.

ಎಂಐಟಿಯ ‘ಸೋಲಾರ ಮೊಬಿಲ್’ ತಂಡ ಈ ಎಸ್‌ಎಂ-ಎಸ್1 ಸೋಲಾರ್ ಕಾರನ್ನು ಸ್ಥಳೀಯವಾಗಿ ತಯಾರಿಸಿದೆ. ಕಾರಿಗೆ ಬೇಕಾದ ಸೋಲಾರ್ ಪ್ಯಾನೆಲ್‌ನ್ನು ಟಾಟಾ ಸೋಲಾರ್ ನೀಡಿದ್ದು, ಎಲ್ಲಾ ಖರ್ಚುಗಳು ಸೇರಿ ಈ ಕಾರಿನ ತಯಾರಿಗೆ ಒಟ್ಟು ಸುಮಾರು 30 ರಿಂದ 35 ಲಕ್ಷ ರೂ.ವೆಚ್ಚ ಬಂದಿದೆ. ಇದರಲ್ಲಿ ಮಣಿಪಾಲ ವಿವಿ 10 ಲಕ್ಷ ರೂ. ನೀಡಿದೆ ಎಂದು ಡಾ.ಪ್ರಭು ತಿಳಿಸಿದರು.

ಸೂರ್ಯನ ಬೆಳಕಿನಲ್ಲಿ ಸುಮಾರು 4ರಿಂದ 5ಗಂಟೆಗಳ ಕಾಲ ಚಾರ್ಜ್ ಆದ ಕಾರು ಗರಿಷ್ಠ ಗಂಟೆಗೆ 80 ಕಿ.ಮೀ. ವೇಗದಲ್ಲಿ 180 ಕಿ.ಮೀ. ಕ್ರಮಿಸಲಿದೆ. ಒಳ್ಳೆಯ ಸೂರ್ಯನ ಬೆಳಕಿನಲ್ಲಿ ಇದು 200-220ಕಿ.ಮೀ. ದೂರವನ್ನು ಕ್ರಮಿಸುತ್ತದೆ. ಕಳೆದ ವರ್ಷ ಸ್ಪರ್ಧೆಯೊಂದರಲ್ಲಿ ಭಾಗವಹಿಸಲು ಮೊದಲ ಬಾರಿ ನಿರ್ಮಿಸಲಾದ ಈ ಸೋಲಾರ್ ಕಾರನಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಲಾಗಿದೆ. ನಮ್ಮ ವಿದ್ಯಾರ್ಥಿಗಳು ನಾಲ್ವರು ಪ್ರಯಾಣಿಕರು ಆಸೀನರಾಗ ಬಹುದಾದ ಕಾರನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದು ಅವರು ವಿವರಿಸಿದರು.

ಸೌರಶಕ್ತಿ ಚಾಲಿತ ವಾಹನಗಳ ವಿಷಯದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳನ್ನೊಳಗೊಂಡ ‘ಸೋಲಾರ ಮೊಬಿಲ್’ತಂಡ ಕಳೆದ ಹಲವು ತಿಂಗಳುಗಳಿಂದ ಹಗಲು-ರಾತ್ರಿ ಎನ್ನದೇ ನಡೆಸಿದ ಪ್ರಯತ್ನ ಇದೀಗ ಫಲ ನೀಡಿದೆ. ಅದನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ತಂಡ ಶ್ರಮಿಸುತ್ತಿದೆ ಎಂದು ಡಾ.ಪ್ರಭು ತಿಳಿಸಿದರು.

ಸೋಲಾರ್ ಮೊಬಿಲ್ ತಂಡದ ಸದಸ್ಯರೇ ಸಂಶೋಧಿಸಿ, ಅಭಿವೃದ್ಧಿ ಪಡಿಸಿ, ವಾಹನದ ಎಲ್ಲಾ ಮುಖ್ಯ ಭಾಗಗಳನ್ನು ಜೋಡಿಸಿ ತಯಾರಿಸಿರುವ ಈ ಸೋಲಾರ್ ಕಾರು ತಂಡದ ಹಾಗೂ ಕಾಲೇಜಿನ ಹೆಮ್ಮೆಯ ಸಾಧನೆಯಾಗಿದೆ. ಭಾರತ ರತ್ನ ಡಾ.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನವಾದ ಸೆ.15ರಂದು ಎಂಐಟಿಯಲ್ಲಿ ನಡೆಯುವ ಇಂಜಿನಿಯರ್ಸ್‌ ದಿನಾಚರಣೆಯ ಸಂದರ್ಭ ಇದನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಂಐಟಿಯ ಪ್ರಾಧ್ಯಾಪಕರಾದ ಪ್ರೊ.ಜಗನ್ನಾಥ ಕೆ., ಪ್ರೊ.ಕುಮಾರನ್, ಡಾ.ಗಣೇಶ ಕುಡ್ವ, ಪ್ರೊ.ಬಾಲಕೃಷ್ಣ ಮುದ್ದೋಡಿ ಹಾಗೂ ಉಮಾನಂದ ಕೆ.ಡಿ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News