ರಿಯಾಯಿತಿ ದರದಲ್ಲಿ ಜನಪ್ರತಿನಿಧಿಗಳಿಗೂ ಪಾಸು ನೀಡಿ: ಭವಾನಿ ಚಿದಾನಂದ
ಪುತ್ತೂರು, ಸೆ. 12: ವಿದ್ಯಾರ್ಥಿಗಳು, ಗೃಹರಕ್ಷಕದಳ ಸೇರಿದಂತೆ ಸಮಾಜದ ಹಲವಾರು ಜನತೆಗೆ ಕೆಎಸ್‌ಆರ್‌ಟಿಸಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಬಸ್ ಪಾಸುಗಳು ನೀಡಲಾಗುತ್ತಿದೆ. ಅದರಂತೆ ಜನಪ್ರತಿನಿಧಿಗಳು ಸಾಮಾಜಿಕ ಸೇವೆ ನಡೆಸುತ್ತಿದ್ದು, ಇವರಿಗೂ ರಿಯಾಯಿತಿ ದರದಲ್ಲಿ ಪಾಸು ದೊರಕುವಂತಾಗಬೇಕು. ಈ ಬಗ್ಗೆ ಇಲಾಖೆ ನಿರ್ಣಯ ಕೈಗೊಳ್ಳಿ ಎಂದು ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಹೇಳಿದರು.
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾಸಿಕ ಕೆಡಿಪಿಯ ಅಧ್ಯಕ್ಷತೆ ವಹಿಸಿದ್ದ ಅವರು ಕೆಎಸ್ಸಾರ್ಟಿಸಿ ಪಾಲನಾ ವರದಿ ಚರ್ಚೆ ವೇಳೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದರು.
ಕಾಣಿಯೂರು, ಬೆಳ್ಳಾರೆ ಭಾಗಗಳಲ್ಲಿ ಸಂಚರಿಸುವ ಪುತ್ತೂರು ಡಿಪೋ ಬಸ್ಸುಗಳು ರವಿವಾರ ಬೆಳಗ್ಗೆ ಮಾತ್ರ ಬರುತ್ತವೆ. ಸಂಜೆ ಬರುವುದೇ ಇಲ್ಲ. ಶಾಲೆ, ಕಚೇರಿಗೆ ರಜೆ ನೀಡುವಂತೆ ಬಸ್ಸಿಗೂ ರವಿವಾರ ರಜೆ ಕೊಡುತ್ತೀರಾ ಎಂದು ಉಪಾಧ್ಯಕ್ಷೆ ರಾಜೇಶ್ವರಿ ಅವರು ಕೆಎಸ್‌ಆರ್‌ಟಿಸಿ ಅಧಿಕಾರಿಯಲ್ಲಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಆಧಿಕಾರಿ ಬಸ್ಸುಗಳಿಗೆ ರಜೆ ಇಲ್ಲ. ಮುಂದೆ ಹೀಗಾದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಗೌಡ ಬಜತ್ತೂರು ಪುತ್ತೂರು ಡಿಪೋ ಬಸ್ಸುಗಳು ಸಮರ್ಪಕವಾಗಿ ಕೆಲಸ ಮಾಡುತ್ತಿದೆಯಾ. ಅಥವಾ ಕಿಟಕಿ, ಬಾಗಿಲು, ಸೀಟ್ ಗಳಿಲ್ಲದೆ ಬಸ್ಸುಗಳನ್ನೇ ಓಡಿಸುತ್ತಿದ್ದೀರಾ ಎಂದು ಪ್ರಶ್ನಿಸಿದರು. ಎಲ್ಲಾ ಸರಿ ಇದೆ ಎಂದು ಉತ್ತರಿಸಿದ ಅಧಿಕಾರಿಯನ್ನು ಬಿಡದ ಮುಕುಂದ ಗೌಡ ನೀವು ಸರಕಾರಿ ಬಸ್ಸಿನಲ್ಲಿ ಎಂದಾದರೂ ಹೋಗಿದ್ದೀರಾ. ಸರಕಾರಿ ಬಸ್ಸುಗಳು ಬಿಡುವಷ್ಟು ಹೊಗೆಯನ್ನು ಬೇರೆ ಯಾವುದೇ ವಾಹನಗಳು ಬಿಡುವುದಿಲ್ಲ. ಅದರ ಚೆಕಪ್ ಮಾಡಿಸಿ ಎಂದು ಸೂಚಿಸಿದರು.
ಗಂಗಾಕಲ್ಯಾಣ ಯೋಜನೆಗೆ ಸಂಬಂಧಪಟ್ಟ ಅಧಿಕಾರಿಯೊಬ್ಬರನ್ನು ಸ್ವತಹಾ ಅಧ್ಯಕ್ಷೆ ಚಿದಾನಂದರವರು ಪ್ಲೀಸ್ ಬನ್ನಿ ಸಭೆಗೆ ಎಂದು ವಿನಂತಿಸಿದ ಬಗ್ಗೆ ಕೆಡಿಪಿಯಲ್ಲಿ ನಡೆಯಿತು. ಇಲಾಖಾ ಪ್ರಗತಿ ವರದಿ ಚರ್ಚೆಯ ಸಂದರ್ಭದಲ್ಲಿ ಅಧ್ಯಕ್ಷೆ ಭವಾನಿ ಚಿದಾನಂದ ಅವರು ಈ ಅಧಿಕಾರಿಯೊಂದಿಗೆ ನೀವು ಸಭೆಗೆ ಸರಿಯಾಗಿ ಬರುತ್ತಿಲ್ಲ. ಫೋನ್ ಮಾಡಿದರೆ ರಿಸೀವ್ ಮಾಡುವುದಿಲ್ಲ. ದಯವಿಟ್ಟು ಸಭೆಗೆ ಬನ್ನಿ ಎಂದರು.
ಇಲಾಖೆಗಳು ಪಾಲನಾ ವರದಿಯನ್ನು ಸರಿಯಾಗಿ ನೀಡುತ್ತಿಲ್ಲ. ಹಲವು ಸಲ ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿಯಾಗಿದೆ. ಆದರೂ ನೀವು ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ಮಾಡುತ್ತಿಲ್ಲ. ಇನ್ನು ಯಾವುದೇ ಇಲಾಖೆಯವರು ಸಭೆಗೆ 10 ದಿನ ಮೊದಲು ಪಾಲನಾ ವರದಿಯನ್ನು ನೀಡದಿದ್ದರೆ ನಾನು ಕೆಡಿಪಿ ಸಭೆಯನ್ನು ನಡೆಸುವುದಿಲ್ಲ ಎಂದು ಅಧ್ಯಕ್ಷೆ ಭವಾನಿ ಚಿದಾನಂದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
20 ಮದಸ ಮಕ್ಕಳು ಶಾಲೆಯಿಂದ ಹೊರಗೆ
ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಕೊರತೆ ಬಗ್ಗೆ ಕೆಡಿಪಿಯಲ್ಲಿ ಮತ್ತೆ ಪ್ರಸ್ತಾಪವಾಯಿತು. ತಾಲೂಕಿನಲ್ಲಿ ಎಷ್ಟು ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. ಯಾವ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಅದರ ಪಟ್ಟಿ ಎಲ್ಲಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಗೌಡ ಬಜತ್ತೂರು ಹಾಗೂ ಉಪಾಧ್ಯಕ್ಷೆ ರಾಜೇಶ್ವರಿ ಶಿಕ್ಷಣಾಧಿಕಾರಿ ಸುಕನ್ಯಾ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಬಿಇಒ ತಾಲೂಕಿನ ಕೆಲವು ಮದರಸ ಶಾಲೆಗಳಲ್ಲಿ ಕಲಿಯುತ್ತಿರುವ 20 ಮಕ್ಕಳು ಶಾಲೆಯಿಂದ ಹೊರಗುಳಿದಿರುವ ಪ್ರಕರಣಗಳಿವೆ. ಇದರಲ್ಲಿ ಕೆಲವು ಮಕ್ಕಳು ಈಗಾಗಲೇ ಬೇರೆ ತಾಲೂಕಿನ ಮದರಸಗಳಲ್ಲಿ ಸೇರಿಕೊಂಡಿದ್ದಾರೆ ಎಂಬ ಮಾಹಿತಿ ಬಂದಿದೆ ಎಂದರು.
ಸರಕಾರಿ ಶಾಲೆಗಳಲ್ಲಿ ಮಕ್ಕಳು ಹೊರಗುಳಿದಿರುವ ಪ್ರಕರಣಗಳಿಲ್ಲ ಎಂದ ಅವರು ಈಗಾಗಲೇ 84 ಶಿಕ್ಷಕ ’ಹುದ್ದೆ’ಗಳು ಸರಕಾರದಿಂದ ಅನುಮೋದನೆ ಗೊಂಡಿದೆ. ಶಿಕ್ಷಕರ ನೇಮಕಾತಿ ಆದ ತಕ್ಷಣ ಈ ಹುದ್ದೆಗಳು ತುಂಬಲಿವೆ. ಕೊರತೆ ಶಿಕ್ಷಕರ ಪಟ್ಟಿ ಇನ್ನೂ ಮಾಡಿಲ್ಲ. ಕೆಲವು ಶಾಲೆಗಳಿಗೆ ನಿಯೋಜನೆಯ ಮೇಲೆ ವ್ಯವಸ್ಥೆ ಮಾಡಲಾಗಿದೆ ಎಂದರು. ಆಗ ಉಪಾಧ್ಯಕ್ಷೆ ರಾಜೇಶ್ವರಿ ಮಾತನಾಡಿ ಈ ಹಿಂದೆ ಕೆಲವು ಶಾಲೆಗಳಿಗೆ ನಿಯೋಜನೆ ಮಾಡಲಾದ ಶಿಕ್ಷಕರು ತಮ್ಮ ಮೂಲ ಶಾಲೆ ಬಿಟ್ಟು ಹೋಗಿಲ್ಲ. ಅವರ ಮೇಲೆ ಕ್ರಮಕೈಗೊಂಡಿದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಬಿಇಒ ಅದು ಹಿಂದಿನ ಶಿಕ್ಷಣಾಧಿಕಾರಿ ಮಾಡಿದ್ದು, ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.
ಕಡಬ ಭಾಗದಲ್ಲಿ 10 ಸರಕಾರಿ ಕೆರೆಗಳಿದ್ದು, ಇದರಲ್ಲಿ 3 ಕೆರೆಯನ್ನು ಒತ್ತುವರಿ ಮಾಡಲಾಗಿದೆ ಎಂಬ ಮಾಹಿತಿಯನ್ನು ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ತಿಳಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕಾರ್ಯನಿರ್ವಹಣಾಧಿಕಾರಿ ಎಸ್,ಜಗದೀಶ್ ತಿಳಿಸಿದರು.
ಅಕ್ಟೋಬರ್ 2ರಿಂದ ಮಾತೃಪೂರ್ಣ ಯೋಜನೆ ಜಾರಿಗೆ ಬರಲಿದೆ. ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರ ನೀಡುವ ಕಾರ್ಯಕ್ರಮ ಇದಾಗಿದ್ದು, ಯಾವುದೇ ಕಾರಣಕ್ಕೂ ಮನೆಗೆ ಈ ಆಹಾರ ನೀಡಲು ಅವಕಾಶವಿಲ್ಲ. ಅಂಗನವಾಡಿಗೆ ಬಂದರೆ ಮಾತ್ರ ಊಟದ ಅವಕಾಶವನ್ನು ಪಡೆಯಬಹುದಾಗಿದೆ ಎಂದು ಸಿಡಿಪಿಒ ಶಾಂತಿ ಹೆಗ್ಡೆ ಸಭೆಯಲ್ಲಿ ಮಾಹಿತಿ ನೀಡಿದರು.
ಜಿಪಂ ಇಂಜನಿಯರ್ ವಿಭಾಗದಿಂದ ಕಾಮಗಾರಿಗಳಿಗೆ ಎಸ್ಟಿಮೇಟ್ ತಯಾರಿಸುವ ಕೆಲಸ ನಿಧಾನವಾಗುತ್ತಿದೆ. ಇದರಿಂದ ಕಾಮಗಾರಿಗಳು ನಡೆಯದೆ ಮಂಜೂರಾದ ಹಣ ವಾಪಾಸು ಮಾಡುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಕಳೆದ ವರ್ಷ ಗ್ರಾಮ ಪಂಚಯತ್ ಗಳಿಂದ ಸುಮಾರು 30ರಿಮದ 40 ಲಕ್ಷದಷ್ಟು ಹಣ ವಾಪಾಸಾಗಿದೆ. ಇದಕ್ಕೆ ಈ ಬಾರಿ ಅವಕಾಶ ಮಾಡಿಕೊಡಬೇಡಿ. ಇದು ಚುನಾವಣೆಯ ವರ್ಷವಾಗಿದ್ದು. ಫೆಬ್ರವರಿ ಒಳಗೆ ಕಾಮಗಾರಿಗಳು ಮುಗಿಯಬೇಕಾಗಿದೆ. ನಿಮ್ಮ ಕೆಲಸ ಕ್ಲಪ್ತ ಸಮಯಕ್ಕೆ ಮಾಡಿಕೊಡಿ ಎಂದು ಜಿಪಂ ಇಂಜನಿಯರ್ ಗೆ ಕಾರ್ಯನಿರ್ವಹಣಾಧಿಕಾರಿ ಎಸ್. ಜಗದೀಶ್ ಸೂಚಿಸಿದರು.
ಗಂಗಾಕಲ್ಯಾಣ ಯೋಜನೆಗೆ ವಿದ್ಯುತ್ ಸಂಪರ್ಕ ಜೋಡಿಸುವ ವಿಚಾರದ ಬಗ್ಗೆ ಚರ್ಚೆ ನಡೆದಾಗ ಮೆಸ್ಕಾಂ ಅಧಿಕಾರಿ ಮಾತನಾಡಿ ಗಂಗಾಕಲ್ಯಾಣ ಯೋಜನೆಯ ಸ್ಥಳಕ್ಕೆ ಹೋದಾಗ ಅಲ್ಲಿ ಕೊಳವೆಬಾವಿಯೇ ಇರುವುದಿಲ್ಲ. ಇದಕ್ಕೆ ಹೇಗೆ ವಿದ್ಯುತ್ ಸಂಪರ್ಕ ಮಾಡುವುದು ಎಂದರು. ಎಲ್ಲಾ ಅರ್ಜಿಗಳನ್ನು ಒಮ್ಮೆಯೇ ಕೊಡುವುದು ಬಿಟ್ಟು ಗಂಗಾಕಲ್ಯಾಣ ಯೋಜನೆಯ ಅಧಿಕಾರಿಗಳು ಅಜಿಗಳು ಬಂದಂತೆ ನಮಗೆ ಕಳುಹಿಸಿದರೆ ಕೆಲಸ ಮಾಡುವುದು ಸುಲಭವಾಗುತ್ತದೆ ಎಂದರು.
ಬಜತ್ತೂರು ಗ್ರಾಮವನ್ನು ಕಡಬ ತಾಲೂಕಿಗೆ ಸೇರಿಸುವುದರ ವಿರುದ್ಧ ಈಗಾಗಲೇ ಗ್ರಾಂಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಗಳು ನಿರ್ಣಯ ಮಾಡಿವೆ. ಜಿಲ್ಲಾಧಿಕಾರಿಗೂ ಈ ಬಗ್ಗೆ ಮನವಿ ಮಾಡಲಾಗಿದೆ. ಈ ಬಗ್ಗೆ ಏನಾಗಿದೆ ಎಂದು ಸ್ಥಾಯಿಸಮಿತಿ ಅಧ್ಯಕ್ಷ ಮುಕುಂದ ಗೌಡ ಅಧಿಕಾರಿಗಳಲ್ಲಿ ಪ್ರಶ್ನಿಸಿದರು. ಈ ಬಗ್ಗೆ ನಮಗೇನೂ ಮಾಹಿತಿ ಬರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಬಜತ್ತೂರು ಗ್ರಾಮದ ವ್ಯಾಪ್ತಿಯ ನೆಡುತೋಪಿನಲ್ಲಿರುವ ಗಾಳಿಮರಗಳನ್ನು 2019ರಲ್ಲಿ ಕಡಿಯಲಾಗುವುದು. ನಂತರ ಸುಮಾರು 20 ಹೆಕ್ಟೇರ್ ಪ್ರದೇಶದಲ್ಲಿನ ಈ ತೋಪನ್ನು ಬಜತ್ತೂರು ಗ್ರಾಮಪಂಚಾಯತ್ ಗೆ ಹಸ್ತಾಂತರ ಮಾಡಲು ಸಾಧ್ಯ ಎಂದು ಅಧಿಕಾರಿಗಳು ಮುಕುಂದ ಗೌಡರ ಪ್ರಶ್ನೆಗೆ ಉತ್ತರಿಸಿದರು.
ಸಭೆಯಲ್ಲಿ ಪುತ್ತೂರು ತಹಶೀಲ್ದಾರ್ ಅನಂತಶಂಕರ, ಕಡಬ ತಹಸೀಲ್ದಾರ್ ಜಾನ್‌ಪ್ರಕಾಸ್, ತಾ.ಪಂ. ಯೋಜನಾಧಿಕಾರಿ ಗಣಪತಿಭಟ್ ಉಪಸ್ಥಿತರಿದ್ದರು. ಕಾರ್ಯನಿರ್ವಹಣಾಧಿಕಾರಿ ಎಸ್. ಜಗದೀಶ್ ಸ್ವಾಗತಿಸಿ ಕಲಾಪ ನಿರ್ವಹಿಸಿದರು.