×
Ad

ಮಂಗಳೂರು ವಿ.ವಿ ಕ್ರಾಸ್‍ಕಂಟ್ರಿ: ಆಳ್ವಾಸ್ ಚಾಂಪಿಯನ್

Update: 2017-09-12 20:51 IST

ಮೂಡುಬಿದಿರೆ, ಸೆ. 12: ಆಳ್ವಾಸ್ ಕಾಲೇಜು ಮೂಡುಬಿದಿರೆ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಜಂಟಿ ಆಶ್ರಯದಲ್ಲಿ ಮಂಗಳೂರು ವಿ.ವಿ ಅಂತರ್ ಕಾಲೇಜು ಕ್ರಾಸ್‍ಕಂಟ್ರಿ ಚಾಂಪಿಯನ್‍ಶಿಪ್‍ನಲ್ಲಿ ಅತಿಥೇಯ ಆಳ್ವಾಸ್ ಕಾಲೇಜು ಪುರುಷ ಹಾಗೂ ಮಹಿಳಾ ತಂಡಗಳು ಚಾಂಪಿಯನ್ ಆಗಿ ಮೂಡಿಬಂದಿದೆ. 

ಆಳ್ವಾಸ್ ಹುಡುಗರ ತಂಡ 15ನೇ ಬಾರಿ ಚಾಂಪಿಯನ್ ಆಗಿ ಮೂಡಿಬಂದಿದ್ದು, ಕುರುಂಜಿ ವಿಶ್ವನಾಥ ಗೌಡ ಸ್ಮರಣಾರ್ಥ ಟ್ರೋಫಿಯನ್ನು ತನ್ನ ದಾಗಿಸಿಕೊಂಡಿದೆ. ಆಳ್ವಾಸ್ ಹುಡುಗಿಯರ ತಂಡವು 14ನೇ ಬಾರಿಗೆ ಚಾಂಪಿಯನ್ ಆಗಿ ಮೂಡಿಬಂದಿದ್ದು, ಕೈಕುರೆ ಶ್ರೀರಾಮಣ್ಣ ಗೌಡ ಸ್ಮರಣಾರ್ಥ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ಪುರುಷರ ವಿಭಾಗದಲ್ಲಿ ಸುಬ್ರಹ್ಮಣ್ಯದ ಕೆಎಸ್‍ಎಸ್ ತಂಡ ದ್ವಿತೀಯ, ಉಜಿರೆ ಎಸ್‍ಡಿಎಂ ತೃತೀಯ, ಎಫ್‍ಎಂಕೆಎಂಸಿ ಮಡಿಕೇರಿ ನಾಲ್ಕನೇ ಹಾಗೂ ಆಳ್ವಾಸ್ ಕಾಲೇಜು ಆಫ್ ಫಿಸಿಕಲ್ ಎಜ್ಯುಕೇಶನ್ ಐದನೇ ಸ್ಥಾನವನ್ನು ಪಡೆದುಕೊಂಡಿದೆ.

ಮಹಿಳಾ ವಿಭಾಗದಲ್ಲಿ ಎಸ್‍ಡಿಎಂ ಉಜಿರೆ ದ್ವಿತೀಯ, ಸುಬ್ರಹ್ಮಣ್ಯದ ಕೆಎಸ್‍ಎಸ್ ಕಾಲೇಜು ತೃತೀಯ, ಆಳ್ವಾಸ್ ಕಾಲೇಜ್ ಆಫ್ ಫಿಸಿಕಲ್ ಎಜ್ಯುಕೇಶನ್ ನಾಲ್ಕನೇ ಹಾಗೂ ನಿಟ್ಟೆ ಎನ್‍ಎಸ್‍ಎಎಂ-ಎಫ್‍ಜಿಸಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ.

ಆಳ್ವಾಸ್ ಕಾಲೇಜಿನ ಆರತಿ ಪಟೀಲ್ ದತ್ತಾತ್ರಿಯ 6 ಕಿ.ಮೀ ಅನ್ನು 23.19.19 ನಿಮಿಷದಲ್ಲಿ ಕ್ರಮಿಸಿ ಮಹಿಳಾ ವಿಭಾಗದ ಚಾಂಪಿಯನ್ ಆಗಿದ್ದಾರೆ. ಆಳ್ವಾಸ್ ಕಾಲೇಜಿನ ರಂಜಿತ್ ಕುಮಾರ್ ಪಟೀಲ್ 12 ಕಿ.ಮೀ ಓಟವನ್ನು 40.22.1 ನಿಮಿಷದಲ್ಲಿ ಕ್ರಮಿಸಿ ಪುರುಷರ ವಿಭಾಗದಲ್ಲಿ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಜ್ಯೋತಿ ಚೌಹ್ಹಾನ್, ರಿಶು ಸಿಂಗ್, ಸೈಲಿ ಸತೀಶ್ ಕ್ರಮವಾಗಿ ದ್ವಿತೀಯ ತೃತೀಯ ಹಾಗೂ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ನಿಟ್ಟೆ ಎನ್‍ಎಸ್‍ಎಎಂ-ಎಫ್‍ಜಿಸಿ ಕಾಲೇಜಿನ ಸುಮ ಐದನೇ ಸ್ಥಾನ ಪಡೆದುಕೊಂಡಿದ್ದಾರೆ. 

ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಅರ್ಜುನ್ ಕುಮಾರ್ 2ನೇ ಸ್ಥಾನ, ಕಾಂತಿಲಾಲ್ ದೇವರಾಮ್ ಕುಂಬಾರ್ 2ನೇ ಸ್ಥಾನ, ಸತೀಶ್ ಕುಮಾರ್ ಯಾದವ 4ನೇ ಸ್ಥಾನ, ರಾಬಿನ್ ಸಿಂಗ್ 5ನೇ ಸ್ಥಾನ, ಸುರೇಶ್ ಹಿರಮಾನ್ 6ನೇ ಸ್ಥಾನ ಪಡೆದುಕೊಂಡಿದ್ದಾರೆ. 

ಚಾಲನೆ:  ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಕ್ರಾಸ್‍ಕಂಟ್ರಿಗೆ ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಚಾಲನೆ ನೀಡಿದರು. ಮೂಡುಬಿದಿರೆ ಪುರಸಭೆ ಸದಸ್ಯ ಮನೋಜ್ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿಗಳಾದ ವಿವೇಕ್ ಆಳ್ವ, ವಿನಯ್ ಆಳ್ವ ಉಪಸ್ಥಿತರಿದ್ದರು. 

ಸಮಾರೋಪ: ವಿದ್ಯಾಗಿರಿ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮೂಡುಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್, ಮಂಗಳೂರು ವಿ.ವಿ ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕ ಹರಿದಾಸ್ ಕೂಳೂರು ,ಮಂಗಳೂರು ವಿವಿ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ  ವೇಣುಗೋಪಾಲ ನೋಂಡಾ, ವಿ4 ಸುದ್ದಿವಾಹಿನಿಯ ಆಡಳಿತ ನಿರ್ದೇಶಕ ಲಕ್ಷ್ಮಣ ಕುಂದರ್ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. 

ಚೀನಾ ತೈಪೆಯಲ್ಲಿ ನಡೆದ ವಲ್ರ್ಡ್ ವಿವಿ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಆಳ್ವಾಸ್‍ನ ಇಬ್ಬರು ವಿದ್ಯಾರ್ಥಿಗಳ ವೆಚ್ಚವನ್ನು ಭರಿಸಿದ ಆಳ್ವಾಸ್ ಸಂಸ್ಥೆಗೆ ಮಂಗಳೂರು ವಿವಿಯಿಂದ 2.50 ಲಕ್ಷ ರೂಗಳ ನೆರವಿನ ಮೊತ್ತವನ್ನು ಹರಿದಾಸ್ ಕೂಳೂರು ಪ್ರಾಂಶುಪಾಲ ಕುರಿಯನ್ ಅವರಿಗೆ ಹಸ್ತಾಂತರಿಸಿದರು. ರತ್ನಾಕರ ಪುತ್ತೂರಾಯ ಕಾರ್ಯಕ್ರಮ ನಿರೂಪಿಸಿದರು.

ಕ್ರಾಸ್‍ಕಂಟ್ರಿಯಲ್ಲಿ 34 ಕಾಲೇಜುಗಳಿಂದ 250 ಓಟಗಾರರು ಕ್ರಾಸ್‍ಕಂಟ್ರಿಯಲ್ಲಿ ಪಾಲ್ಗೊಂಡರು. ಅದರಲ್ಲಿ 180 ಪುರುಷ ಹಾಗೂ 70 ಮಂದಿ ಮಹಿಳಾ ಓಟಗಾರರು ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News