ಸಜೀಪಮೂಡ ಹಿಂದೂ ರುದ್ರಭೂಮಿಗೆ ಹೈಕೋರ್ಟ್ ತಡೆ
ಬಂಟ್ವಾಳ, ಸೆ. 12: ಸಜೀಪಮೂಡ ಹಿಂದೂ ರುದ್ರಭೂಮಿಗೆ ರಾಜ್ಯ ಹೈಕೋಟ್ ತಡೆಯಾಜ್ಞೆ ಆದೇಶ ಹೊರಡಿಸಿದೆ ಎಂದು ಸಜೀಪಮೂಡ, ಬೊಳ್ಳಾಯಿ-ಪಟ್ಟುಗುಡ್ಡೆ ನಾಗರಿಕ ಸಮಿತಿ ಅಧ್ಯಕ್ಷ ಅಬ್ದುಲ್ ಕರೀಂ ಬೊಳ್ಳಾಯಿ ಹೇಳಿದ್ದಾರೆ.
ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಕೇವಲ 100 ಮೀಟರ್ ವ್ಯಾಪ್ತಿಯಲ್ಲಿರುವ ಜನವಸತಿ ಪ್ರದೇಶದಲ್ಲಿ ರುದ್ರಭೂಮಿಯನ್ನು ನಿರ್ಮಿಸಲಾದ ಗ್ರಾ.ಪಂ.ನ ಕ್ರಮವನ್ನು ನ್ಯಾಯಾಪೀಠದ ಮುಂದೆ ನಿವೇದಿಸಲಾಗಿದ್ದು, ಸಾರ್ವಜನಿಕ ಹಿತಾಸ್ತಕಿಯನ್ನು ಪರಿಗಣಿಸಿದ ನ್ಯಾಯಪೀಠ ಈ ತೀರ್ಪು ನೀಡಿದ್ದು, ನಾಗರಿಕರ ಅಭಿಪ್ರಾಯವನ್ನು ಗೌರವಂತಿಸುವಂತಾಗಿದೆ ಎಂದು ಅವರು ತಿಳಿಸಿದರು.
ಹೈಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಯಲ್ಲಿದ್ದರೂ, ಹಿಂದೂ ರುದ್ರಭೂಮಿಯನ್ನು ನಿರ್ಮಿಸಲು ಹೊರಡಿರುವ ಸ್ಥಳೀಯ ಗ್ರಾಮ ಪಂಚಾಯತ್‌ನ ನಿರ್ಧಾರ ನ್ಯಾಯಾಂಗ ನಿಂದನೆಯಾಗಿದ್ದು, ಈ ಬಗ್ಗೆ ಸಂಬಂಧಿತ ನ್ಯಾಯ ಪೀಠ ಹಾಗೂ ಶಿಸ್ತು ಪ್ರಾಧಿಕಾರಗಳಲ್ಲಿ ಪ್ರಶ್ನಿಸಲಾಗುವುದು ಎಂದವರು ಎಚ್ಚರಿಸಿದರು.
ಲೋಕಾರ್ಪಣೆಗೊಳಿಸಲಾದ ರುದ್ರಭೂಮಿಯ ವಠಾರದಲ್ಲಿ ಜನ ವಾಸ್ತವ್ಯ ಇರುವ ಮನೆಗಳು, ಜನ-ಸಂಚಾರ, ರಸ್ತೆ-ಸಾರಿಗೆ, ಕುಡಿಯುವ ನೀರಿನ ಬಾವಿ, ತೋಟ, ಆರಾಧಾನ ಸ್ಥಳಗಳಿದ್ದು, ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸ್ಥಳೀಯ ನಿವಾಸಿ ನಝೀರ್ ಅಹ್ಮದ್ ಎಂ.ಎನ್. ದಾವೆ ಹೂಡಿದ್ದು, ಕೋರ್ಟ್ ಜನರ ಹಿತಾಸಕ್ತಿ ಪರವಾಗಿ ಆದೇಶಿಸಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ, ಹಿಂದೂ ರುದ್ರಭೂಮಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ಸದಾನಂದ ಪೂಂಜಾ ಅವರ ನೇತೃತ್ವದಲ್ಲಿ ಸರಕಾರ ಕಾದಿರಿಸಲಾದ ಸ್ಮಶಾನ ಪೊರಂಬೋಕು ಜಮೀನಿನಲ್ಲಿ ಹಿಂದೂ ರುದ್ರಭೂಮಿ ನಿರ್ಮಿಸುವ ಬಗ್ಗೆ ಗ್ರಾಮಸ್ಥರು ಅಭಿಪ್ರಾಯಿಸಿ, ಈ ಬಗ್ಗೆ ಆಗಿನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಸ್ಥಳ ಪರಿಶೀಲಿಸಿ ರುದ್ರಭೂಮಿಗೆ ಸೂಕ್ತವೆಂದು ಆದೇಶಿಸಿದ್ದರು. ಆದರೆ ಸ್ಥಳೀಯ ಗ್ರಾಪಂ ಅಧ್ಯಕ್ಷ ಗಣಪತಿ ಭಟ್ಟರ ರಾಜಕೀಯ ಇಚ್ಛಾಶಕ್ತಿ ಹಾಗೂ ವೈಯಕ್ತಿಕ ನಿಲುನಿಂದಾಗಿ ಈ ಸಾರ್ವಜನಿಕ ಕಾರ್ಯಕ್ಕೆ ತಡೆ ಉಂಟಾಗಿತ್ತು ಎಂದು ಆರೋಪಿಸಿದರು.
ರಾಜಕೀಯ ಉದ್ದೇಶಕ್ಕಾಗಿ ಹಿಂದೂ ರುದ್ರಭೂಮಿಗೆ ಆಕ್ಷೇಪಿಸಿದ ಆಗಿನ ನಾಗರಿಕ ಸಮಿತಿಯ ಪ್ರಮುಖರಾದ ಗಣಪತಿ ಭಟ್ಟರು ಇದೀಗ ಗ್ರಾ.ಪಂ. ಅಧ್ಯಕ್ಷರ ಸ್ಥಾನ ದೊರೆತ ಬಳಿಕ ತಮ್ಮ ಧೋರಣೆಯನ್ನು ಬದಲಾಯಿಸಲು ಏನು ಕಾರಣ ಎನ್ನುವುದನ್ನು ಜನತೆಯ ಮುಂದೆ ಅವರು ಮನವರಿಕೆ ಮಾಡಬೇಕಾಗಿದೆ ಎಂದು ನಾಗರಿಕ ಸಮಿತಿ ಸದಸ್ಯರು ಸವಾಲ್ ಹಾಕಿದರು. ಹಿಂದೂ ರುದ್ರಭೂಮಿ ನಿರ್ಮಿಸಲು ಬೇರೆ ಸೂಕ್ತ ಸರಕಾರಿ ನಿವೇಶನ ಇದ್ದರೂ, ಜನವಸತಿ ಹೊಂದಿರುವ ಜಾಗದಲ್ಲೇ ರುದ್ರಭೂಮಿ ನಿರ್ಮಿಸುವ ಪಂಚಾಯತ್ ಅಧ್ಯಕ್ಷರ ಇರಾದೆ ಕೂಡ ಜನರಲ್ಲಿ ಅನುಮಾನಕ್ಕೆ ಎಡೆಯಾಗಿದ್ದು, ಕೇವಲ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಪಡಿಸಿಕೊಂಡು, ಅವರಿಗೆ ಉದ್ದೇಶಪೂರ್ವಕವಾಗಿಯೇ ಮಾನಸಿಕ ದೌರ್ಜನ್ಯ ಕೊಡುವ ಇರಾದೆಯಿಂದ ಪಂಚಾಯತ್ ಅಧ್ಯಕ್ಷರು ರುದ್ರಭೂಮಿ ನಿರ್ಮಿಸಲು ಹೊರಟಿದ್ದಾರೆಯೇ ಹೊರತು ಹಿಂದೂ ಸಮಾಜದ ಮೇಲಿನ ನೈಜ ಕಾಳಜಿಯಿಂದ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದವರು ತಿಳಿಸಿದರು.
ಪ್ರತಿಷ್ಠೆಗಾಗಿ ಅಧಿಕಾರ ಚಲಾಯಿಸಬೇಡಿ
ಯಾವುದೇ ಜನಪ್ರತಿನಿಧಿಗಳು ಜನರ ಸೇವೆಯನ್ನು ಮಾಡಲು ಅಧಿಕಾರ ಚಲಾಯಿಸುತ್ತಾರೆಯೇ ಹೊರತು, ತಮ್ಮ ಪ್ರತಿಷ್ಠೆಗಾಗಿ ಅಧಿಕಾರ ದುರುಪಯೋಗ ಮಾಡುತ್ತಿಲ್ಲ. ಕೇವಲ ವ್ಯಕ್ತಿಗತವಾದ ಸಾಧನೆಯನ್ನು ಪ್ರದರ್ಶಿಸಲು ಅಧಿಕಾರವನ್ನು ದುರುಪಯೋಗಬಾರದೆಂದು ಪಂಚಾಯತ್ ಅಧ್ಯಕ್ಷರಿಗೆ ಸಲಹೆ ನೀಡುತ್ತಿದ್ದೇವೆ ಎಂದು ನಾಗರಿಕ ಸಮಿತಿಯ ಸದಸ್ಯ ಜಲೀಲ್ ಕಾರಾಜೆ ಅವರು ತಿಳಿಸಿದರು.
ಸಾರ್ವಜನಿಕರ ಅಭಿಪ್ರಾಯದಂತೆ ನಿರ್ಣಯಗಳನ್ನು ಕೈಗೊಂಡು, ಜನರ ಹಿತವನ್ನು ಕಾಯ್ದುಕೊಳ್ಳಬೇಕಾದ ಗ್ರಾಮ ಪಂಚಾಯತ್ ಅಧ್ಯಕ್ಷರು ಜನ ವಿರೋಧಿಯಾಗಬಾರದು. ಗ್ರಾಮದ ಹಿಂದೂ, ಮುಸ್ಲಿಂ ಪ್ರಮುಖರನ್ನು ಸೇರಿಸಿ ಐಕ್ಯತಾ ನಿರ್ಧಾರವನ್ನು ಕೈಗೊಂಡು ಹಿಂದೂ ರುದ್ರಭೂಮಿ ನಿರ್ಮಾಣ ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸುವಂತೆ ಸಲಹೆ ನೀಡಿದ್ದಾರೆ. ನಾಗರಿಕ ಸಮಿತಿಯ ಸದಸ್ಯರಾದ ಅಹ್ಮದ್ ನಝೀರ್, ಹಸೈನಾರ್ ಕಂಚಿಲ, ಫಾರೂಕ್ ಕಂಚಿಲ, ಮಹ್ಮದ್ ರಫೀಕ್ ಇದ್ದರು.