ಅಕ್ರಮ ಗಾಂಜಾ ಸಾಗಾಟ: ಆರೋಪಿ ಸೆರೆ
Update: 2017-09-12 21:14 IST
ಮಂಗಳೂರು, ಸೆ. 12: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೋರ್ವನನ್ನು ಆರ್ಥಿಕ ಮತ್ತು ಮಾದಕ ಅಪರಾಧ ಪೊಲೀಸರು ನಗರದ ಉರ್ವ ಸಮುದಾಯ ಭವನದ ಬಳಿಯಿಂದ ಬಂಧಿಸಿದ್ದಾರೆ.
ಉರ್ವ ಮಾರಿಗುಡಿ ಲಕ್ಷ್ಮೀ ಕಂಪೌಂಡ್ ನಿವಾಸಿ ಅನೀಶ್ (27) ಬಂಧಿತ ಆರೋಪಿ. ಈತನಿಂದ 5 ಸಾವಿರ ರೂ. ಮೌಲ್ಯದ ಗಾಂಜಾ, 2 ಸಾವಿರ ರೂ. ಮೌಲ್ಯದ ಮೊಬೈಲ್ ಹಾಗೂ 600 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಆರೋಪಿಯ ಕೈಯ್ಯಲ್ಲಿದ್ದ ಹಸಿರು ಬಣ್ಣದ ಕಾಟನ್ ಬಟ್ಟೆಯ ಚೀಲವನ್ನು ಪರಿಶೀಲನೆ ನಡೆಸಿದಾಗ ಅದರೊಳಗೆ 48 ಪ್ಯಾಕೇಟ್‌ನ 107 ಗ್ರಾಂ ತೂಕದ ಗಾಂಜಾ ಪತ್ತೆಯಾಗಿದೆ. ಆರೋಪಿಯನ್ನು ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಅವರ ಆದೇಶದಂತೆ ಡಿಸಿಪಿ ಹನುಮಂತರಾಯ, ಆರ್ಥಿಕ ಮತ್ತು ಮಾದಕ ಅಪರಾಧ ವಿಭಾಗದ ಇನ್‌ಸ್ಪೆಕ್ಟರ್ ಕೆ.ಮುಹಮ್ಮದ್ ಶರೀಫ್, ಸಿಬ್ಬಂದಿಗಳಾದ ಶಾಜು ನಾಯರ್, ಲಕ್ಷ್ಮೀಶ, ಜಗದೀಶ್, ಕಿಶೋರ್ ಪೂಜಾರಿ ಹಾಗೂ ಭಾಸ್ಕರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.