×
Ad

ಶಾಲೆಯಲ್ಲಿ ಮಕ್ಕಳ ಸುರಕ್ಷೆಗೆ ಕೋರಿ ದಾವೆ: ಸೆ. 15ರಂದು ಸುಪ್ರೀಂ ಕೋರ್ಟ್ ವಿಚಾರಣೆ

Update: 2017-09-12 22:54 IST

ಹೊಸದಿಲ್ಲಿ, ಸೆ. 12: ದೇಶಾದ್ಯಂತ ಶಾಲೆಗಳಲ್ಲಿ ಮಕ್ಕಳ ಸುರಕ್ಷೆ ಹಾಗೂ ಯೋಗಕ್ಷೇಮದ ಖಾತರಿ ನೀಡಲು ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಅನುಷ್ಠಾನ ಕೋರಿ ಇಬ್ಬರು ಮಹಿಳಾ ವಕೀಲರು ಸಲ್ಲಿಸಿದ ಮನವಿಯನ್ನು ಸೆಪ್ಟಂಬರ್ 15ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಮಂಗಳವಾರ ಒಪ್ಪಿಕೊಂಡಿದೆ.

ಗುರ್ಗಾಂವ್‌ನ ರ್ಯಾನ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಭೀಕರವಾಗಿ ಹತ್ಯೆಯಾದ ಬಾಲಕನ ತಂದೆ ಇದೇ ರೀತಿಯ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಈಗಾಗಲೆ ನೋಟಿಸು ಜಾರಿ ಮಾಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಅಮಿತಾವ್ ರಾಯ್ ಹಾಗೂ ಎ.ಎಂ. ಖಾನ್ವಿಲ್ಕರ್ ಅವರನ್ನು ಒಳಗೊಂಡ ಪೀಠ ಹೇಳಿದೆ.

ಈ ಹಿಂದಿನ ಮನವಿಯೊಂದಿಗೆ ಈ ಮನವಿಯನ್ನೂ ಸೇರಿಸಿದ್ದೇವೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, ವಕೀಲರಾದ ಅಭಾ ಶರ್ಮಾ ಹಾಗೂ ಸಂಗೀತ ಭಾರತಿ ಅವರ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆಯನ್ನು ಶುಕ್ರವಾರ ನಡೆಸಲಾಗುವುದು ಎಂದು ಹೇಳಿದೆ. ಈ ನ್ಯಾಯವಾದಿಗಳು ತಮ್ಮ ಮನವಿಯಲ್ಲಿ, ಶಾಲೆಗೆ ಹೋಗುತ್ತಿರುವ ಮಕ್ಕಳ ಸುರಕ್ಷೆಗೆ ಅಸ್ತಿತ್ವದಲ್ಲಿರುವ ವಿವಿಧ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಬೇಕು ಎಂದು ಕೋರಿದ್ದಾರೆ.

ಶಾಲಾ ಬಸ್ ಅಥವಾ ವಾಹನಗಳಿಗೆ ಹತ್ತುವ ಹಾಗೂ ಇಳಿಯುವ ಸಂದರ್ಭ ಮಕ್ಕಳ ಬಗ್ಗೆ ಎಚ್ಚರ ವಹಿಸುವ ಬಗ್ಗೆ ಖಾತರಿ ನೀಡಲು ಶಾಲೆಗಳಿಗೆ ಕೆಲವು ಹೆಚ್ಚುವರಿ ಮಾರ್ಗಸೂಚಿಗಳನ್ನು ಕೂಡಾ ನೀಡಬೇಕು ಎಂದು ಈ ದಾವೆಯಲ್ಲಿ ಆಗ್ರಹಿಸಲಾಗಿದೆ.

ದುರಂತದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಬಾಲಕನ ತಂದೆ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರಕಾರ, ಹರ್ಯಾಣ ಪೊಲೀಸ್ ಸಿಬಿಐಸ್‌ಇ ಹಾಗೂ ಸಿಬಿಐಗೆ ನೋಟಿಸು ಜಾರಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News