×
Ad

“ಕೇರಳದಲ್ಲಿ ಜಿಹಾದಿಗಳಿಂದ ಬಿಜೆಪಿ, ಆರೆಸ್ಸೆಸ್ ಬೆಂಬಲಿತೆಯ ಹತ್ಯೆ”

Update: 2017-09-13 19:34 IST

“ಕೇರಳದಲ್ಲಿ ಜಿಹಾದಿಗಳಿಂದ ಬಿಜೆಪಿ ಬೆಂಬಲಿತೆಯ ಹತ್ಯೆ” ಎನ್ನುವ ತಲೆಬರಹದಲ್ಲಿ ಕೆಲದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಕಾರಿನಲ್ಲಿ ಬರುವ ಮಹಿಳೆಯೊಬ್ಬರನ್ನು ಬೈಕ್ ನಲ್ಲಿ ಬಂದ ಇಬ್ಬರು ಅಡ್ಡಗಟ್ಟಿ ಆಕೆಯನ್ನು ಹೊರಗೆಳೆಯುತ್ತಾರೆ. ಅವರಿಂದ ತಪ್ಪಿಸುಕೊಳ್ಳಲು ಯತ್ನಿಸಿದಾಗ ಆಕೆಗೆ ಗುಂಡಿಕ್ಕುತ್ತಾರೆ. ಈ ಸಂದರ್ಭ ಗುಂಡಿಕ್ಕಿದ ವ್ಯಕ್ತಿಯೊಬ್ಬ ಮಲಯಾಳಂನಲ್ಲಿ ಮಾತನಾಡಲು ಆರಂಭಿಸುತ್ತಾನೆ. ಹೀಗೆ ಮಾತನಾಡುವಾಗ ಹಲವು ಬಾರಿ “ಆರೆಸ್ಸೆಸ್” ಎಂಬ ಪದವನ್ನು ಪದೇ ಪದೇ ಬಳಸುತ್ತಾನೆ.

ಆದರೆ ಅಲ್ಲಿ ನಡೆದದ್ದೇನು, ಆತ ಮಲಯಾಳಂನಲ್ಲಿ ಹೇಳಿದ್ದೇನು ಎನ್ನುವುದನ್ನು ಗಮನಿಸುವ ಗೋಜಿಗೆ ಹೋಗದೆ ಸುಳ್ಳು ಸುದ್ದಿಗಳನ್ನು ಹರಡುವವರಿಗೆ “ಆರೆಸ್ಸೆಸ್” ಎಂಬ ಪದವೇ ಸಾಕಾಗಿದೆ. ಇದನ್ನೇ ಬಳಸಿಕೊಂಡು ಸಾಮಾಜಿಕ ಜಾಲತಾಣ ಟ್ವಿಟ್ಟರ್ ಹಾಗೂ ಫೇಸ್ಬುಕ್ ನಲ್ಲಿ ತಮಗೆ ತೋಚಿದ ಕಥೆಗಳನ್ನು ಕಟ್ಟಿದ್ದಾರೆ.

@AmiteshK01 ಎಂಬ ಹೆಸರಿನ ಟ್ವಿಟ್ಟರ್ ಖಾತೆಯೊಂದು ಈ ವಿಡಿಯೋವನ್ನು ಪೋಸ್ಟ್ ಮಾಡಿ, “ಕೇರಳದಲ್ಲಿ ಜಿಹಾದಿಗಳಿಂದ ಮತ್ತೊಂದು  ಬಿಜೆಪಿ ಬೆಂಬಲಿತ ಮಹಿಳೆಯ ಕೊಲೆ” ಎಂದು ತಲೆಬರಹ ನೀಡಿದೆ. ವಿಡಿಯೋದ ಮೇಲೆ, “ಕೇರಳದಲ್ಲಿ ಮುಸ್ಲಿಮರಿಂದ ಆರೆಸ್ಸೆಸ್ ಮಹಿಳೆಯ ಹತ್ಯೆ” ಎನ್ನುವ ಬರಹವನ್ನು ಹಾಕಲಾಗಿದೆ.

ಆದರೆ ನಿಜವಾಗಿಯೂ ಅದು ಬೀದಿಯಲ್ಲಿ ಹಾಡಹಗಲೇ ನಡೆದ ಹತ್ಯೆ ಆಗಿರಲಿಲ್ಲ.  ಬದಲಾಗಿ, ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ರ ಹತ್ಯೆಯನ್ನು ಖಂಡಿಸಿ ಡಿವೈಎಫ್ ಐ ನಡೆಸಿದ ಬೀದಿನಾಟಕವಾಗಿತ್ತು.

ಆದರೆ ಇದ್ಯಾವುದನ್ನೂ ತಿಳಿಯುವ ಗೋಜಿಗೆ ಹೋಗದವರು ಹಾಗೂ ದ್ವೇಷವನ್ನೇ ಹರಡಲು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವವರು ಈ ವಿಡಿಯೋವನ್ನು ಶೇರ ಮಾಡಲು ಶುರುವಿಟ್ಟುಕೊಂಡಿದ್ದರು.

ಝೀ ನ್ಯೂಸ್ ಚಾನೆಲ್ ಈ ವಿಡಿಯೋವನ್ನು “ಆರೆಸ್ಸೆಸ್ ನ ಮಹಿಳೆಯನ್ನು ಕೇರಳದ ನಡುಬೀದಿಯಲ್ಲಿ ಎಡಪಂಥೀಯ ಮುಸ್ಲಿಮರು ಕೊಂದರು” ಎಂಬ ತಲೆಬರಹದೊಂದಿಗೆ ಪ್ರಸಾರ ಮಾಡಿತ್ತು ಎಂದು ಮಾತೃಭೂಮಿ ವರದಿ ಮಾಡಿದೆ. ಆದರೆ ನಂತರ ಚಾನೆಲ್ ಈ ವರದಿಯನ್ನು ತೆಗೆದಿದ್ದರೂ ಹಲವರು ಸಂಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಈ ಸುದ್ದಿ ಸುಳ್ಳು ಎಂದು ಹಲವರು ತಕ್ಷಣವೇ ಮಾಹಿತಿಯನ್ನೂ ಹಂಚಿಕೊಂಡಿದ್ದರು.

ಈ ರೀತಿಯ ಸುದ್ದಿಗಳನ್ನು ಹರಡುವುದರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಶಕ್ತಿಗಳು ಸಕ್ರಿಯವಾಗಿದೆ. ಇದರಲ್ಲಿ ಅಮಿತೇಶ್ ಕುಮಾರ್ ಎಂಬ ಹೆಸರಿನ ಟ್ವಿಟ್ಟರ್ ಖಾತೆಯೊಂದು ಗೌರಿ ಲಂಕೇಶ್ ಅವರ ಹತ್ಯೆಗೆ ಸಂಬಂಧಿಸಿ, “ಗುಂಡೇಟಿಗೆ ಬಲಿಯಾದ ಪತ್ರಕರ್ತೆಯ ಪೂರ್ಣ ಹೆಸರು ಗೌರಿ ಲಂಕೇಶ್ ಪ್ಯಾಟ್ರಿಕ್. ಆಕೆಯ ಹೆಸರಿನಿಂದ ಪ್ಯಾಟ್ರಿಕ್ ಅನ್ನು ಅಡಗಿಸುವುದರ ಹಿಂದೆ ಯಾವ ಅಜೆಂಡಾವಿದೆ. ಕ್ರಿಶ್ಚಿಯಾನಿಟಿಯ ಬಗ್ಗೆ ಏಕೆ ನಾಚಿಕೆ” ಎಂದು ಟ್ವೀಟ್ ಮಾಡಿತ್ತು. ಆದರೆ ಅಸಲಿಗೆ ಈ ಅತಿ ಬುದ್ಧಿವಂತಿಕೆಯ ಅಮಿತೇಶ್ ಕುಮಾರ್ ಎಂಬ ಹೆಸರಿನ ಖಾತೆ ಗೌರಿ ಲಂಕೇಶ್ ‘ಪತ್ರಿಕೆ’ಯನ್ನು ‘ಪ್ಯಾಟ್ರಿಕ್’ ಎಂದು ಅರ್ಥಮಾಡಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News