ಅಸ್ಸಾಂ ಪ್ರವಾಹ ಪೀಡಿತರಿಗೆ ವಾಯಿದೆ ಮುಗಿದ ಉತ್ಪನ್ನಗಳನ್ನು ವಿತರಿಸಿದ ಪತಂಜಲಿ: ಆರೋಪ

Update: 2017-09-13 14:21 GMT

ಹೊಸದಿಲ್ಲಿ, ಸೆ.13: ಅಸ್ಸಾಂ ಪ್ರವಾಹ ಸಂತ್ರಸ್ತರಿಗೆ ವಾಯಿದೆ ಮುಗಿದ ವಸ್ತುಗಳನ್ನು ಬಾಬಾ ರಾಮ್ ದೇವ್ ರ ಪತಂಜಲಿ ಸಂಸ್ಥೆ ವಿತರಿಸಿದೆ ಎನ್ನುವ ಆರೋಪವೊಂದನ್ನು ಸ್ಥಳೀಯ ಟಿವಿ ಚಾನೆಲೊಂದು ಮಾಡಿದೆ.

ವಾಯಿದೆ ಮುಗಿದ ಹಾಲಿನ ಹುಡಿ ಹಾಗೂ ಜ್ಯೂಸ್ ಪ್ಯಾಕೆಟ್ ಗಳನ್ನು ಪತಂಜಲಿ ವಿತರಿಸಿದೆ ಎಂದು ಜನರು ಆರೋಪಿಸುತ್ತಿರುವುದನ್ನು ಚಾನೆಲ್ ಬಿತ್ತರಿಸಿದೆ.

“ಮಂಜುಳಿಯಲ್ಲಿರುವ ಕಂಪೆನಿಯ ಪ್ರತಿನಿಧಿಯನ್ನು ನಾವು ಈ ಬಗ್ಗೆ ಪ್ರಶ್ನಿಸಿದಾಗ, 'ನಮ್ಮಲ್ಲಿ ಕೆಲ ಹಳೆಯ ಉತ್ಪನ್ನಗಳಿದ್ದವು. ಆದರೆ ಪ್ರವಾಹದ ಸಂತ್ರಸ್ತರಿಗೆ ನಾವು ಅದನ್ನು ವಿತರಿಸಿಲ್ಲ' ಎಂದು ಪ್ರತಿಕ್ರಿಸಿದ್ದಾರೆ" ಎಂದು ಮಂಜುಳಿಯ ಡೆಪ್ಯುಟಿ ಕಮಿಷನರ್ ಪಲ್ಲವ್ ಗೋಪಾಲ್ ಝಾ ಹೇಳಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತವು ತನಿಖೆಯನ್ನು ನಡೆಸಲಿದೆ.

ಕಂಪೆನಿ ಈ ಅಪವಾದವನ್ನು ನಿರಾಕರಿಸಿದ್ದು, ಆದರೆ, “ಯಾವಾಗಲೂ ಸಾಗಾಟ ಮತ್ತು ವಿತರಣೆಯನ್ನು ನಿಯಂತ್ರಿಸಲು ಹಾಗೂ ನಮ್ಮ ಪ್ರತಿನಿಧಿಯಲ್ಲದೆ ಬೇರೆ ಯಾರಾದರೂ ತಪ್ಪು ಮಾಡಿದ್ದರೆ ನಾವು ಜವಾಬ್ದಾರರಲ್ಲ” ಎಂದು ಹೇಳಿದೆ.

“ವಾಯಿದೆ ಮುಗಿದ ಉತ್ಪನ್ನಗಳನ್ನು ನಾವು ಕಳುಹಿಸುವುದಿಲ್ಲ. ಮಾನವೀಯತೆಯ ನೆಲೆಯಲ್ಲಿ ಪತಂಜಲಿ ಅಸ್ಸಾಂ ಪ್ರವಾಹ ಸಂತ್ರಸ್ತರಿಗೆ ನೆರವಾಗಿದೆ” ಎಂದು ಪತಂಜಲಿ ಸಂಸ್ತೆಯ ವಕ್ತಾರ ಎಸ್.ಕೆ.ತಿಜಾರಿವಾಲ ಹೇಳಿದ್ದಾರೆ.

ವಾಯಿದೆ ಮುಗಿದ ಉತ್ಪನ್ನಗಳನ್ನು ನಾಶಗೊಳಿಸಬೇಕು ಅಥವಾ ಹಸ್ತಾಂತರಿಸಬೇಕು ಎಂದು ಜಿಲ್ಲಾಡಳಿತವು ಸಂಸ್ಥೆಗೆ ಹೇಳಿದೆ. ಪತಂಜಲಿ ಉತ್ಪನ್ನಗಳನ್ನು ಸೇವಿಸಿದ ನಂತರ ಹಲವರು ಅಸ್ವಸ್ಥರಾಗಿದ್ದಾರೆ ಎಂದು ಸ್ಥಳೀಯ ಚಾನೆಲ್ ವರದಿ ಮಾಡಿದ್ದರೆ ಜಿಲ್ಲಾಡಳಿತವು ಇದನ್ನು ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News