×
Ad

ನ. 19 ರಿಂದ ಪುರಭವನದಲ್ಲಿ 'ಯಕ್ಷಾಂಗಣ ತಾಳಮದ್ದಳೆ ಸಪ್ತಾಹ'

Update: 2017-09-13 19:53 IST

ಮಂಗಳೂರು, ಸೆ. 13: 'ಯಕ್ಷಾಂಗಣ ಮಂಗಳೂರು' ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಆಯೋಜಿಸುವ ಐದನೇ ವರ್ಷದ 'ಯಕ್ಷಗಾನ ತಾಳಮದ್ದಳೆ ಸಪ್ತಾಹ'ವು ನ.19 ರಿಂದ 25ರ ವರೆಗೆ ಮಂಗಳೂರು ಪುರಭವನದಲ್ಲಿ ಜರಗಲಿದೆ.

ರವಿವಾರದಿಂದ ಶನಿವಾರದವರೆಗೆ ಒಂದು ವಾರ ಪೂರ್ತಿ ನಡೆಯುವ ಈ ಕಲಾಸಂಭ್ರಮದಲ್ಲಿ ಯಕ್ಷಗಾನದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ನ.19 ರಂದು ದ.ಕ.ಜಿಲ್ಲೆಯ ಉದ್ಯಮಿ, ಶಿಕ್ಷಣ, ಕ್ರೀಡೆ ಹಾಗೂ ಸಾಮಾಜಿಕ ಕ್ಷೇತ್ರದ ಸಾಧಕ ಎ. ಸದಾನಂದ ಶೆಟ್ಟಿ ಅವರಿಗೆ 75 ವರ್ಷ ತುಂಬಿದ ಸಂದರ್ಭದಲ್ಲಿ 'ಸದಾಭಿವಂದನಂ' ಎಂಬ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಅಲ್ಲದೆ ಪ್ರಸ್ತುತ ಸಪ್ತತಿ ಆಚರಿಸುತ್ತಿರುವ ಹಿರಿಯ ಯಕ್ಷಗಾನ ವಿದ್ವಾಂಸ, ಪ್ರಸಿದ್ಧ ಅರ್ಥಧಾರಿ ಡಾ.ಎಂ. ಪ್ರಭಾಕರ ಜೋಶಿಯವರ 'ವಾಗರ್ಥ ಸರಣಿ 'ಯನ್ನೂ ಸಂಯೋಜಿಸಲಾಗಿದ್ದು, ಸಪ್ತಾಹದ ಎಲ್ಲಾ ದಿನಗಳಲ್ಲೂ ಅವರು ಅರ್ಥಧಾರಿಯಾಗಿ ಭಾಗವಹಿಸುವರು. ಯಕ್ಷಗಾನ ರಂಗದ ನೂರಕ್ಕೂ ಹೆಚ್ಚು ಪ್ರಸಿದ್ಧ ಕಲಾವಿದರು ಹಿಮ್ಮೇಳ - ಮುಮ್ಮೇಳಗಳಲ್ಲಿ ಪಾಲ್ಗೊಳ್ಳುವರು.

ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಅವರು ತಾಳಮದ್ದಳೆ ಸಪ್ತಾಹವನ್ನು ಉದ್ಘಾಟಿಸಲಿದ್ದು, ಮಂಗಳೂರಿನ ಎ.ಜೆ. ಸಮೂಹ ಸಂಸ್ಥೆಗಳ ಸಂಸ್ಥಾಪಕ ಹಾಗೂ ಯಕ್ಷಾಂಗಣದ ಗೌರವಾಧ್ಯಕ್ಷ ಡಾ.ಎ.ಜೆ.ಶೆಟ್ಟಿ ಅಧ್ಯಕ್ಷತೆ ವಹಿಸುವರು. ನ.25 ರಂದು ಜರಗುವ ಸಮಾರೋಪ ಸಮಾರಂಭದಲ್ಲಿ ಡಾ.ಎಂ.ಪ್ರಭಾಕರ ಜೋಶಿಯವರಿಗೆ 2017-18 ನೇ  ಸಾಲಿನ 'ಯಕ್ಷಾಂಗಣ ಪ್ರಶಸ್ತಿ'ನೀಡಿ ಸನ್ಮಾನಿಸಲಾಗುವುದು ಎಂದು ಯಕ್ಷಾಂಗಣ ಮಂಗಳೂರು ಇದರ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News