ಉಡುಪಿಯಲ್ಲಿ ಜನ್ಮಾಷ್ಟಮಿ ಸಂಭ್ರಮ, ಲೀಲೋತ್ಸವಕ್ಕೆ ಸಜ್ಜು

Update: 2017-09-13 16:13 GMT

ಉಡುಪಿ, ಸೆ.13: ಬುಧವಾರ ದಿನವಿಡೀ ಉಪವಾಸವಿದ್ದು ಕಡಗೋಲು ಕೃಷ್ಣನ ಜನ್ಮದಿನದ ಸಂಭ್ರಮವನ್ನು ಆಚರಿಸಿದ ಉಡುಪಿಯ ಜನತೆ ಗುರುವಾರ ಶ್ರೀಕೃಷ್ಣ ಲೀಲೋತ್ಸವಕ್ಕೆ ಸಜ್ಜಾಗಿದ್ದಾರೆ. ಇದಕ್ಕಾಗಿ ಇಡೀ ಉಡುಪಿ ಮುಖ್ಯವಾಗಿ ಶ್ರೀಕೃಷ್ಣ ಮಠ ಹಾಗೂ ರಥಬೀದಿ ಪರಿಸರಗಳು ಸಿಂಗರಿಸಿಕೊಂಡು ಸಂಭ್ರಮಿಸುತ್ತಿವೆ.

ಕೃಷ್ಣ ಜನ್ಮಾಷ್ಟಮಿಯ ದಿನವಾದ ಇಂದು ಹಾಗೂ ವಿಟ್ಲಪಿಂಡಿಯ ದಿನವಾದ ಗುರುವಾರ ಉಡುಪಿಯಲ್ಲಿ ಬಿಡುವಿರದ ಕಾರ್ಯಕ್ರಮಗಳಿವೆ. ಉಡುಪಿ ಹಾಗೂ ರಥಬೀದಿ ಪರಿಸರದಲ್ಲಿ ಹಬ್ಬದ ವಾತಾವರಣವಿದೆ. ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು ಉಪವಾಸವಿದ್ದು ದಿನವಿಡೀ ವಿವಿಧ ಪೂಜೆ, ಮಧ್ಯರಾತ್ರಿ ಮಹಾಪೂಜೆಯ ಬಳಿಕ ರಾತ್ರಿ 12:34ಕ್ಕೆ ಶ್ರೀಕೃಷ್ಣನಿಗೆ ಹಾಗೂ ಚಂದ್ರನಿಗೆ ಅರ್ಘ್ಯ ಪ್ರದಾನ ಮಾಡಿದ್ದಾರೆ. ಬಳಿಕ ಭಕ್ತಾದಿಗಳು ಸರದಿಯಂತೆ ಅರ್ಘ್ಯಪ್ರದಾನ ಮಾಡುವ ಅವಕಾಶ ಪಡೆದರು.

ಅರ್ಘ್ಯ ಪ್ರದಾನಕ್ಕೆ ಮುನ್ನ ಪರ್ಯಾಯ ಶ್ರೀಗಳು ಕೃಷ್ಣನಿಗೆ ತುಳಸೀ ಅರ್ಚನೆ ಮಾಡಿದರು. ಇಡೀ ಮಠದಲ್ಲಿ ಹೂವಿನ ವಿಶೇಷ ಅಲಂಕಾರ ಮಾಡಲಾಗಿತ್ತು. ಇಂದು ಕೃಷ್ಣ ದರ್ಶನಕ್ಕೆ ಭಕ್ತರ ಭಾರೀ ಜನಸಂದಣಿ ಇತ್ತು. ರಾತ್ರಿ ಅರ್ಘ್ಯಪ್ರದಾನ ಮಾಡುವ ಸಂದರ್ಭದಲ್ಲಿ ಬಾಲಕೃಷ್ಣನಿಗೆ ಅರ್ಪಿಸುವ ಉಂಡೆ ಕಟ್ಟುವ ಕಾರ್ಯ ಮಠದ ಭೋಜನ ಶಾಲೆಯಲ್ಲಿ ನಡೆಯಿತು. ಬೆಳಗ್ಗೆ ಪೇಜಾವರ ಶ್ರೀಗಳಿಬ್ಬರು ಉಂಡೆಗಳನ್ನು ಕಟ್ಟಲು ಮುಹೂರ್ತ ನೆರವೇರಿಸಿದರು. ಮಧ್ವ ಮಂಟಪ ಸೇರಿದಂತೆ ವಿವಿದೆಡೆ ಅಖಂಡ ಭಜನೆ ಬೆಳಗಿನಿಂದಲೇ ನಡೆಯುತ್ತಿದೆ.

ವಿವಿಧ ಸ್ಪರ್ಧೆಗಳು, ಹುಲಿವೇಷ: ಇಂದು ನೂತನ ರಾಜಾಂಗಣ, ಅನ್ನಬ್ರಹ್ಮ ಹಾಗೂ ಭೋಜನ ಶಾಲೆಗಳಲ್ಲಿ ಮೊಸರು ಕಡೆಯುವ ಸ್ಪರ್ಧೆ ಹಾಗೂ ಮಕ್ಕಳಿಗೆ ಮೂರು ವಿಭಾಗಗಳಲ್ಲಿ ಮುದ್ದುಕೃಷ್ಣ, ಬಾಲಕೃಷ್ಣ ಹಾಗೂ ಕಿಶೋರ ಕೃಷ್ಣ ಸ್ಪರ್ಧೆಗಳು ನಡೆದವು. ನೂರಾರು ಸಂಖ್ಯೆಯಲ್ಲಿ ಮಕ್ಕಳು ಮುದ್ದು ಮುದ್ದಾದ ರೀತಿಯಲ್ಲಿ ವೈವಿಧ್ಯಮಯ ಕೃಷ್ಣನ ವೇಷ ಧರಿಸಿ, ಆತನ ಎಲ್ಲಾ ತುಂಟತನಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದರು.

ಆದರೆ ಹೊರಗೆ ಬೀದಿಯಲ್ಲಿ ಈ ಬಾರಿ ವೇಷಗಳ ಸಂಖ್ಯೆ ತೀರಾ ಕಡಿಮೆ ಇತ್ತು. ಕೆಲವೇ ಕೆಲವು ಹುಲಿವೇಷ ತಂಡಗಳ ಆರ್ಭಟ ಇಂದು ನಗರದಲ್ಲಿ ಕೇಳಿಸಿದವು. ಗುರುವಾರ ಇವುಗಳ ಪ್ರಮಾಣದಲ್ಲಿ ಹೆಚ್ಚಳ ಕಂಡುಬರುವ ಸಾಧ್ಯತೆ ಇದೆ. ರವಿ ಕಟಪಾಡಿ ಹಾಗೂ ರಾಮಾಂಜಿ ಅವರು ವಿಶಿಷ್ಟ ರೀತಿಯ ವೇಷಗಳೊಂದಿಗೆ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಅವರು ವೇಷ ಧರಿಸಿ ಸಂಗ್ರಹಿಸುವ ಹಣವನ್ನು ಅನಾರೋಗ್ಯ ಪೀಡಿತರಿಗೆ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ನೀಡುವ ಘೊೀಷಣೆಯನ್ನು ಈಗಾಗಲೇ ಮಾಡಿದ್ದಾರೆ.
ಗುರುವಾರ ಅಪರಾಹ್ಣ 3:30ಕ್ಕೆ ರಥಬೀದಿಯಲ್ಲಿ ವಿಟ್ಲಪಿಂಡಿ ಮಹೋತ್ಸವ ಆರಂಭಗೊಳ್ಳಲಿದೆ. ಬೆಳಗ್ಗೆ 10 ರಿಂದ ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿ ವತಿಯಿಂದ ಭೋಜನ ಪ್ರಸಾದ ವಿತರಣೆ ರಾಜಾಂಗಣ ಸೇರಿದಂತೆ ವಿವಿದೆಡೆ ಗಳಲ್ಲಿ ನಡೆಯಲಿದೆ. 3:30ಕ್ಕೆ ಕೃಷ್ಣನ ಲೀಲೋತ್ಸವ ಮೆರವಣಿಗೆ ಆರಂಭ ಗೊಳ್ಳಲಿದ್ದು, ಚಿನ್ನದ ರಥದಲ್ಲಿ ಕೃಷ್ಣನ ಮಣ್ಣಿನ ಮೂರ್ತಿ (ಚಾತುರ್ಮಾಸ್ಯದ ಕಾರಣ ಉತ್ಸವ ಮೂರ್ತಿಯನ್ನು ಹೊರಗೆ ತೆಗೆಯುವ ಪದ್ಧತಿ ಇಲ್ಲ) ಮೆರವಣಿ ಯಲ್ಲಿ ಸಾಗಿ ಬರಲಿದೆ. ಈ ಮೃಣ್ಮಯ ಮೂರ್ತಿಯನ್ನು ಮಧ್ವಸರೋವರದಲ್ಲಿ ಜಲಸ್ತಂಭನ ಗೊಳಿಸುವುದರೊಂದಿಗೆ ಕೃಷ್ಣ ಲೀಲೋತ್ಸವಕ್ಕೆ ತೆರೆಬೀಳಲಿದೆ.
 ಗುರುವಾರ ಬರುವ ಭಕ್ತರಿಗೆ ಹಂಚಲು ಲಕ್ಷಗಳಿಗೂ ಅಧಿಕ ವಿವಿಧ ಬಗೆಯ ಉಂಡೆ, ಲಾಡು ಹಾಗೂ ಚಕ್ಕುಲಿಗಳನ್ನು ತಯಾರಿಸಲಾಗಿದೆ. ಈ ಬಾರಿಯೂ ಅವುಗಳನ್ನುಪ್ರತಿಯೊಬ್ಬರಿಗೂ ಹಂಚಲಾಗುವುದು ಎಂದು ಮಠದ ಮೂಲಗಳು ತಿಳಿಸಿವೆ.

ಹೂ ಭರ್ಜರಿ ಮಾರಾಟ: ಈ ಬಾರಿ ದೂರದ ಹಾಸನ, ಮೈಸೂರು ಗಳಿಂದ ಬಂದಿರುವ ಹೂವಿನ ಮಾರಾಟಗಾರರು ಭರ್ಜರಿ ವ್ಯಾಪಾರ ನಡೆಸಿದ್ದಾರೆ. ಕೇವಲ ರಥಬೀದಿಯ ಸುತ್ತಮುತ್ತ ಮಾತ್ರವಲ್ಲದೇ ಕೆ.ಎಂ. ಮಾರ್ಗ, ಮಾರುತಿ ವಿಥಿಕಾ, ಸಿಟಿ ಮತ್ತು ಸರ್ವಿಸ್ ಬಸ್ ನಿಲ್ದಾಣದ ಆಸುಪಾಸುಗಳಲ್ಲೂ ಭರ್ಜರಿಯಾಗಿಯೇ ವಿವಿಧ ಬಗೆಯ, ವಿವಿಧ ಬಣ್ಣಗ ಹೂವುಗಳ ವ್ಯಾಪಾರ ನಡೆಯಿತು.

ವಿಟ್ಲಪಿಂಡಿ: ಗುರುವಾರ ಅಪರಾಹ್ನ ನಡೆಯುವ ಶ್ರೀಕೃಷ್ಣ ಲೀಲೋತ್ಸವ ಸಂದರ್ಭ ದಲ್ಲಿ ರಥಬೀದಿಯ 15 ಕಡೆಗಳಲ್ಲಿ ನಿರ್ಮಿಸಲಾದ ಗೋಪುರ, ಮಂಟಪಗಳಲ್ಲಿ ಶ್ರೀಮಠದ ಗೊಲ್ಲ ವೇಷಧಾರಿಗಳು ಮೊಸರು ಕುಡಿಕೆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಸಂಜೆ 5 ರಿಂದ ರಾಜಾಂಗಣದಲ್ಲಿ ವಿಟ್ಲಪಿಂಡಿ ಉತ್ಸವ ಪ್ರಯುಕ್ತ ವಿಶೇಷ ಹುಲಿವೇಷ ಸ್ಪರ್ಧೆ ಹಾಗೂ ಜಾನಪದ ವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಹುಲಿವೇಷದಾರಿಗಳಿಗೆ ಮತ್ತು ವಿಶೇಷ ವೇಷಧಾರಿಗಳಿಗೆ ಶ್ರೀಮಠದ ವತಿ ವಿಶೇಷ ಬಹುಮಾನಗಳನ್ನು ನೀಡಲಾಗುತ್ತಿದೆ. ಇದರೊಂದಿಗೆ ಶೀರೂರು ಮಠದಿಂದಲೂ ಹುಲಿ ವೇಷದಾರಿಗಳಿಗೆ ವಾಹನ ನಿಲುಗಡೆ ಪ್ರದೇಶದಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಬಹುಮಾನ ರೂಪದಲ್ಲಿ ನೋಟಿನ ಹಾರವನ್ನು ಹಾಕಲಾಗುತ್ತದೆ.

ಬಿಗಿ ಬಂದೋಬಸ್ತ್: ಉತ್ಸವದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಗಳಾಗದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಯಿಂದ ಬಿಗು ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಸುತ್ತಮುತ್ತ, ರಥಬೀದಿಯಲ್ಲಿ ಈಗಾಗಲೇ ಸಾಕಷ್ಟು ಸಂಖೆ್ಯಯ ಪೊಲೀಸರನ್ನು ನಿಯೋಜಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News