ಗೌರಿ ಲಂಕೇಶ್ ಹತ್ಯಾಕೋರರನ್ನು ಬಂಧಿಸಲು ಕೆಥೊಲಿಕ್ ಸಭಾ ಆಗ್ರಹ
ಉಡುಪಿ, ಸೆ.13: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸುವುದರೊಂದಿಗೆ ಅವರ ಹತ್ಯಾಕೋರರನ್ನು ಕೂಡಲೇ ಬಂಧಿಸಿ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿ ಉಡುಪಿ ಧರ್ಮಪ್ರಾಂತದ ಕೆಥೊಲಿಕ್ ಸಭಾ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಪತ್ರಕರ್ತೆಯಾಗಿ ಸಮಾಜದ ಆಗು-ಹೋಗುಗಳ ಅಂಕು-ಡೊಂಕುಗಳನ್ನು, ಚಿಂತಕಿಯಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವುಗಳಿಗೆ ಸ್ಪಂದಿಸುತ್ತಿದ್ದ ಗೌರಿ ಲಂಕೇಶ್ ಅವರ ಹತ್ಯೆ ಖಂಡನೀಯ. ನಕ್ಸಲ್‌ವಾದಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರಕಾರಕ್ಕೆ ಸಹಕಾರ ನೀಡುತ್ತಾ, ಅನ್ಯಾಯಗಳನ್ನು ಕೆಚ್ಚೆದೆಯಿಂದ ಪ್ರತಿಭಟಿಸುತ್ತಿದ್ದ ವ್ಯಕ್ತಿಯ ಅಂತ್ಯ ಈ ರೀತಿಯಲ್ಲಿ ನಡೆದಿರುವುದು ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಬಡವರ ಪಾಲಿನ ಅಕ್ಕನಾಗಿ, ಅನ್ಯಾಯಕ್ಕೆ ಒಳಗಾದ ಶೋಷಿತರ ತಾಯಿ ಯಾಗಿ, ಉಚ್ಚ ವಿಚಾರಧಾರೆಗಳಿಂದ ಸಮಾಜವನ್ನು ಜಾಗೃತಗೊಳಿಸುತ್ತಿದ್ದ ಗೌರಿ ಲಂಕೇಶ್ ಹತ್ಯೆಯನ್ನು ಪ್ರಬಲವಾಗಿ ಖಂಡಿಸುವುದಲ್ಲದೆ, ಶೋಷಿತರ ಧ್ವನಿ ಯಾಗಿದ್ದ ಧ್ವನಿಯನ್ನು ಈ ರೀತಿ ಅಂತ್ಯಗೊಳಿಸುವುದು ನಿಜಕ್ಕೂ ಆಘಾತಕಾರಿ ಸಂಗತಿ. ಈ ರೀತಿಯಲ್ಲಿ ಹತ್ಯೆ ಮಾಡಿದವರನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಿ ಮುಂದೆ ಸಮಾಜದಲ್ಲಿ ಇಂತಹ ಘಟನೆಗಳು ನಡಯದಂತೆ ಕಟ್ಟುಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ನಿಯೋಗದಲ್ಲಿ ಕೆಥೊಲಿಕ್ ಸಭಾ ಉಡುಪಿ ಧರ್ಮಪ್ರಾಂತದ ಅಧ್ಯಕ್ಷ ವಲೇರಿಯನ್ ಆರ್. ಫೆರ್ನಾಂಡಿಸ್, ಕಾರ್ಯದರ್ಶಿ ಜಸಿಂತಾ ಕುಲಾಸೊ, ಉಡುಪಿ ವಲಯಾಧ್ಯಕ್ಷೆ ಮೇರಿ ಡಿಸೋಜಾ, ಪದಾಧಿಕಾರಿಗಳಾದ ಮ್ಯಾಕ್ಷಿಮ್ ಡಿಸೋಜಾ, ಮರಿಟಾ ಲೂವಿಸ್, ಲೂಕ್ ಡಿಸೋಜಾ, ಫಿಲಿಪ್ ಡಿಲೀಮಾ, ಜೊಸೆಫ್ ರೆಬೆಲ್ಲೊ, ವಿನ್ಸೆಂಟ್ ಕ್ರಾಸ್ತಾ ಮುಂತಾದವರಿದ್ದರು.