ಗ್ರಾಮೀಣ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ
ಉಡುಪಿ, ಸೆ.13: ಗ್ರಾಮೀಣ ಭಾಗದಲ್ಲಿ ಸ್ಥಳೀಯವಾಗಿ ಸಣ್ಣ ಕೃಷಿ ಉಪಕರಣಗಳ ತಯಾರಿಕಾ ಸೌಲಭ್ಯ ಕಲ್ಪಿಸುವ, ಕೃಷಿ ಯಂತ್ರಗಳ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಉಡುಪಿ ಜಿಲ್ಲೆಯಲ್ಲಿ 2017-18ನೇ ಸಾಲಿನಲ್ಲಿ ಪ್ರತಿ ತಾಲೂಕಿಗೆ ಒಂದರಂತೆ (ಪರಿಶಿಷ್ಟ ಜಾತಿ-1, ಪರಿಶಿಷ್ಟ ಪಂಗಡ-1 ಹಾಗೂ ಸಾಮಾನ್ಯ ವರ್ಗ-1 ಅ್ಯರ್ಥಿಗೆ ಮೀಸಲು) ಒಟ್ಟು 3 ಗ್ರಾಮೀಣ ಕೃಷಿ ಯಂತ್ರೋಪಕರಣ ಸೇವಾ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಕೃಷಿ ಇಂಜಿನಿಯರಿಂಗ್/ಕೃಷಿ/ಆಟೋಮೊಬೈಲ್/ಮೆಕ್ಯಾನಿಕಲ್‌ನಲ್ಲಿ ಡಿಪ್ಲೋಮಾ, ಐ.ಟಿ.ಐ/ಪಿಯುಸಿ ವಿದ್ಯಾರ್ಹತೆ ಹೊಂದಿರ ಬೇಕು. ಕೃಷಿ ವಿವಿಯಿಂದ ಕೃಷಿ ಯಂತ್ರೋಪಕರಣಗಳ ದುರಸ್ತಿ/ನಿರ್ವಹಣಾ ತರಬೇತಿ ಪಡೆದಿರಬೇಕು. ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು 18ರಿಂದ 45ವರ್ಷ ವಯೋಮಿತಿಯ ಉಡುಪಿ ಜಿಲ್ಲೆಯ ಕೃಷಿ ಕುಟುಂಬಕ್ಕೆ ಸೇರಿರಬೇಕು.
ಆಯ್ಕೆಯಾದ ಅಭ್ಯರ್ಥಿಗಳು ಸೇವಾ ಕೇಂದ್ರವನ್ನು ಜಿಲ್ಲಾ ಮಟ್ಟದ ಸಮಿತಿ ತೀರ್ಮಾನಿಸುವ ಹೋಬಳಿಯ ಗ್ರಾಮೀಣ ಭಾಗದ ಪ್ರದೇಶ/ಸ್ಥಳದಲ್ಲಿ ಸ್ಥಾಪಿಸಬೇಕಾಗುತ್ತದೆ. ಆಸಕ್ತ ಅಭ್ಯರ್ಥಿ ಗಳಿಗೆ ಅರ್ಜಿ ಸಲ್ಲಿಸಲು ಅ.3 ಕೊನೆಯ ದಿನವಾಗಿದ್ದು, ಅರ್ಜಿಗಳನ್ನು ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಹೋಬಳಿ ಮಟ್ಟದಲ್ಲಿರುವ ರೈತ ಸಂಪರ್ಕ ಕೇಂದ್ರಗಳಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಜಂಟಿ ಕೃಷಿ ನಿರ್ದೇಶಕರ ಕಚೇರಿ, ಸಿ ಬ್ಲಾಕ್, 2ನೇ ಮಹಡಿ, ಕೊಠಡಿ ಸಂಖ್ಯೆ 304, ರಜತಾದ್ರಿ, ಮಣಿಪಾಲ ಇಲ್ಲಿ ಕಳುಹಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.