×
Ad

ವಿಶ್ವಸಂಸ್ಥೆ ಮಹಾಸಭೆಗೆ ಸೂ ಕಿ ಗೈರು

Update: 2017-09-13 22:09 IST

ಯಾಂಗನ್ (ಮ್ಯಾನ್ಮಾರ್), ಸೆ. 13: ಮ್ಯಾನ್ಮಾರ್‌ನಲ್ಲಿ ಅಲ್ಪಸಂಖ್ಯಾತ ರೊಹಿಂಗ್ಯ ಮುಸ್ಲಿಮರ ವಿರುದ್ಧ ಸೇನೆ ನಡೆಸುತ್ತಿರುವ ಅಮಾನುಷ ದಮನ ಕಾರ್ಯಾಚರಣೆಗೆ ವಿಶ್ವಾದ್ಯಂತ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಈ ಬಾರಿಯ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಪಾಲ್ಗೊಳ್ಳದಿರಲು ಆ ದೇಶದ ನಾಯಕಿ ಆಂಗ್ ಸಾನ್ ಸೂ ಕಿ ನಿರ್ಧರಿಸಿದ್ದಾರೆ.

ಈ ವಿಷಯವನ್ನು ಪಕ್ಷದ ವಕ್ತಾರರೊಬ್ಬರು ಬುಧವಾರ ತಿಳಿಸಿದರು.

ಸೇನೆಯ ದಮನ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಈವರೆಗೆ ಸುಮಾರು 3.7 ಲಕ್ಷ ರೊಹಿಂಗ್ಯ ಮುಸ್ಲಿಮರು ಮ್ಯಾನ್ಮಾರ್‌ನಿಂದ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

ಆಗಸ್ಟ್ 25ರಂದು ರೊಹಿಂಗ್ಯ ಬಂಡುಕೋರರ ತಂಡಗಳು ಹಲವಾರು ಪೊಲೀಸ್ ಠಾಣೆಗಳು ಮತ್ತು ಸೇನಾ ನೆಲೆಗಳ ಮೇಲೆ ಸಂಘಟಿತ ದಾಳಿ ನಡೆಸಿದ ಬಳಿಕ ಸೇನೆಯು ರೊಹಿಂಗ್ಯ ಸಮುದಾಯಗಳ ವಿರುದ್ಧ ಭೀಕರ ಕಾರ್ಯಾಚರಣೆಗೆ ಇಳಿದಿದೆ. ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿರುವುದು ಸೂ ಕಿಗೆ ನುಂಗಲಾರದ ತುತ್ತಾಗಿದೆ. ಇದು ಕಳೆದ ವರ್ಷ ಮ್ಯಾನ್ಮಾರ್‌ನ ನಾಯಕಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅವರು ಎದುರಿಸುತ್ತಿರುವ ಬೃಹತ್ ಬಿಕ್ಕಟ್ಟಾಗಿದೆ.

ಸೂ ಕಿ ಪಡೆದುಕೊಂಡಿರುವ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂಬ ಕೂಗೂ ಎದ್ದಿದೆ.

 ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಮೊದಲ ಭಾಷಣ ಮಾಡಿದ್ದ ಸೂ ಕಿ, ಮುಸ್ಲಿಮ್ ಅಲ್ಪಸಂಖ್ಯಾತರ ಸ್ಥಾನಮಾನ ಕುರಿತ ಬಿಕ್ಕಟ್ಟನ್ನು ಪರಿಹರಿಸಲು ತನ್ನ ಸರಕಾರ ತೆಗೆದುಕೊಂಡಿರುವ ಕ್ರಮಗಳನ್ನು ಸಮರ್ಥಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News