ಅಮೆರಿಕದಲ್ಲಿ ಈಗ ‘ಕೆಲವೇ ಜನರ ಪ್ರಭುತ್ವ’ವಿದೆ: ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಟೀಕೆ

Update: 2017-09-13 17:11 GMT

ಅಟ್ಲಾಂಟ (ಅಮೆರಿಕ), ಸೆ. 13: ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಮಂಗಳವಾರ ಅಮೆರಿಕದ ಹಾಲಿ ವಿದೇಶ ನೀತಿ ಮತ್ತು ಆಂತರಿಕ ವ್ಯವಹಾರಗಳನ್ನು ಕಟುವಾಗಿ ಟೀಕಿಸಿದ್ದಾರೆ. ರಾಜಕೀಯದಲ್ಲಿ ಹಣ ಬಲವು ದೇಶವನ್ನು ‘ಪ್ರಜಾಪ್ರಭುತ್ವಕ್ಕಿಂತಲೂ ಹೆಚ್ಚಾಗಿ ಕೆಲವೇ ಜನರ ಪ್ರಭುತ್ವ (ಆಲಿಗಾರ್ಕಿ)’ವನ್ನಾಗಿ ಮಾಡಿದೆ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ವೈಫಲ್ಯವನ್ನು ವಿಶ್ವ ವೇದಿಕೆಯಲ್ಲಿ ಬಿಂಬಿಸಿದೆ ಎಂದು ಹೇಳಿದ್ದಾರೆ.

ಅಟ್ಲಾಂಟದ ‘ಕಾರ್ಟರ್ ಸೆಂಟರ್’ನಲ್ಲಿ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಲವು ವಿಷಯಗಳ ಬಗ್ಗೆ ಮಾತನಾಡಿದರು. ಆದರೆ, ಅವರು ಮುಖ್ಯವಾಗಿ ರಿಪಬ್ಲಿಕನ್ ಪಕ್ಷದಿಂದ ಬಂದಿರುವ ಅಧ್ಯಕ್ಷ ಟ್ರಂಪ್‌ರ ಅಡಿಯಲ್ಲಿ ದೇಶ ಸಾಗುತ್ತಿರುವ ದಿಕ್ಕಿನ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಡೆಮಾಕ್ರಟಿಕ್ ಪಕ್ಷದವರಾದ 39ನೆ ಅಧ್ಯಕ್ಷ ಕಾರ್ಟರ್ 45ನೆ ಅಧ್ಯಕ್ಷ ಟ್ರಂಪ್‌ಗೆ ಈ ಸಲಹೆಯನ್ನು ನೀಡಿದರು: ‘‘ಶಾಂತಿಯನ್ನು ಕಾಪಾಡಿ, ಮಾನವಹಕ್ಕುಗಳನ್ನು ಬೆಂಬಲಿಸಿ ಮತ್ತು ಸತ್ಯವನ್ನು ಹೇಳಿ’’.

ಉತ್ತರ ಕೊರಿಯದೊಂದಿಗೆ ಟ್ರಂಪ್ ನೇರವಾಗಿ ವ್ಯವಹರಿಸಬೇಕು ಹಾಗೂ ಆ ದೇಶದೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಬೇಕು ಎಂದು 92 ವರ್ಷದ ಮಾಜಿ ಅಧ್ಯಕ್ಷರು ಹೇಳಿದರು.

ಅವರು 1977ರಿಂದ 1981ರವರೆಗೆ ಅಮೆರಿಕದ ಅಧ್ಯಕ್ಷರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News