ಭಟ್ಕಳ: ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಕ್ಕೆ ಚಾಲನೆ
ಭಟ್ಕಳ, ಸೆ. 13: ಉತ್ತರ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲೂಕು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಇದರ ಆಶ್ರಯದಲ್ಲಿ ಬೆಳಕೆ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ಜರಗಿದ ಎರಡು ದಿನಗಳ ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ್ ಕ್ರೀಡಾ ಧ್ವಜಾರೋಹಣ ಮಾಡುವುದರ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕ್ರೀಡೆಗಳಿಂದಾಗಿ ವಿದ್ಯಾರ್ಥಿಗಳಲ್ಲಿ ಕೂಡಿಬಾಳುವ, ಸೌಹಾರ್ಧತೆಯಿಂದ ಸಮಾಜದಲ್ಲಿ ಜೀವಿಸುವ ಗುಣಗಳು ಬೆಳೆಯುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿ ತನ್ನದೆ ಆದ ಪ್ರತಿಭೆಯನ್ನು ಹೊಂದಿದ್ದು ನಮ್ಮಲ್ಲಿ ಅನೇಕರು ರಾಜ್ಯ,ರಾಷ್ಟ್ರಮಟ್ಟಕ್ಕೆ ಸ್ಪರ್ಧೆ ನೀಡುವ ಪ್ರತಿಭೆಗಳಿದ್ದು ಅವರನ್ನು ತರಬೇತುಗೊಳಿಸುವ ಕಾರ್ಯವಾಗಬೇಕು ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ನಾಯ್ಕ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿಯನ್ನು ನೀಡುವುದರ ಮೂಲಕ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಮಾಡುತ್ತಾರೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣೆಗೆಯಲ್ಲಿ ದೈಹಿಕಶಿಕ್ಷಣ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾದುದು ಎಂದರು.
ಭಟ್ಕಳ ತಾಲೂಕು ಪಂಚಾಯತ್ ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಳಕೆ ಗ್ರಾ.ಪಂ.ಅಧ್ಯಕ್ಷ ರಮೇಶ್ ನಾಯ್ಕ, ಭಟ್ಕಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್ ನಾಯ್ಕ, ಮಾಜಿ ಅಧ್ಯಕ್ಷ ಝಾಹಿದ್ ಕೊತ್ವಾಲ್, ದೈಹಿಕ ಶಿಕ್ಷಣ ಅಧೀಕ್ಷ ಶ್ರೀಕಾಂತ್ ನಾಯಕ, ಬೆಳಕೆ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಚಂದ್ರಕಾಂತ್ ಗಾಂವ್ಕರ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಪಟಗಾರ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲ್ ನಾಯ್ಕ ವಂದಿಸಿದರು. ಪ್ರಕಾಶ ಶಿರಾಲಿ ನಿರೂಪಿಸಿದರು.