ಜ್ಞಾನೋದಯಕ್ಕೆ ಕಾರಣವಾಗುವ ಶಿಕ್ಷಣವೇ ನೈಜ ಶಿಕ್ಷಣ: ಶೋಭಾ ನಾಗರಾಜ್
ಬಂಟ್ವಾಳ, ಸೆ. 14: ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ಕೈಗೊಳ್ಳಬೇಕು. ಜೀವನದ ಸೌಧವನ್ನು ನಿರ್ಮಿಸಲು ದೃಢವಾದ ಆಲೋಚನೆ, ಆತ್ಮೀಯ ಭಾವನೆ ಅತೀ ಅಗತ್ಯ. ನಮ್ಮ ಜ್ಞಾನೋದಯಕ್ಕೆ ಕಾರಣವಾಗುವ ಶಿಕ್ಷಣವೇ ನೈಜ ಶಿಕ್ಷಣವಾಗಿದೆ ಎಂದು ಸುಧಾನ ರೆಸಿಡೆನ್ಸಿಯಲ್ ಸ್ಕೂಲ್ ಪುತ್ತೂರಿನ ಮುಖ್ಯೋಪಾಧ್ಯಾಯಿನಿ ಶೋಭಾ ನಾಗರಾಜ್ ಬಿ.ಸಿ.ರೋಡ್ ಕೈಕಂಬದ ಸೂರ್ಯವಂಶ ಬಿಲ್ಡಿಂಗ್ ನಲ್ಲಿ ನಡೆದ ಬಂಟ್ವಾಳ- ಪುತ್ತೂರು ತಾಲೂಕು ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
'ವೃತ್ತಿ ಜೀವನ, ಚಾರಿತ್ರ್ಯ ಮತ್ತು ವ್ಯಕ್ತಿತ್ವ' ಎಂಬ ಶೀರ್ಷಿಕೆಯಡಿಯಲ್ಲಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಕರ್ನಾಟಕವು(ಜಿ.ಐ.ಒ) ನಡೆಸಿದ ರಾಜ್ಯವ್ಯಾಪಿ ಅಭಿಯಾನದ ಅಂಗವಾಗಿ ಜಿ.ಐ.ಒ. ಬಂಟ್ವಾಳ- ಪುತ್ತೂರು ತಾಲೂಕು ವಿಭಾಗವು ಈ ಸಮಾವೇಶವನ್ನು ಹಮ್ಮಿಕೊಂಡಿತ್ತು.
ನಮ್ಮ ಆಲೋಚನೆಗಳನ್ನು ಬದಲಾಯಿಸಬೇಕು. ಆಲೋಚನೆಗಳು ಬದಲಾಗದಿದ್ದರೆ ಸಮಾಜದ ಬದಲಾವಣೆ ಅಸಾಧ್ಯ. ದೂರುವುದನ್ನು ನಿಲ್ಲಿಸಿ ಇತರರನ್ನು ಪ್ರಶಂಸಿಸುವ ಹವ್ಯಾಸವನ್ನು ಬೆಳೆಸಿಕೊಂಡರೆ ನಮ್ಮ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎಮ್.ಎಸ್ಸಿ. ವಿದ್ಯಾರ್ಥಿನಿ ಹರ್ಷಿತ.ಎಮ್ ಹೇಳಿದರು.
ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದ ತೊಕ್ಕೊಟ್ಟಿನ ಹಿರಾ ಕಾಂಪೋಸಿಟ್ ಪಿ.ಯು. ಕಾಲೇಜಿನ ಉಪನ್ಯಾಸಕಿ ರುಕ್ಸಾನ ಉಮರ್ ಮಾತನಾಡಿ, ವೃತ್ತಿ ಜೀವನದ ಯಶಸ್ಸಿನಲ್ಲಿ ವ್ಯಕ್ತಿತ್ವ ಮತ್ತು ಚಾರಿತ್ರ್ಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಿರಿಯರು ಮಕ್ಕಳಲ್ಲಿ ಮೌಲ್ಯದ ಬೀಜಗಳನ್ನು ಬಿತ್ತಿದರೆ ಮಾತ್ರ ಅವರು ಉತ್ತಮ ನಾಗರಿಕರಾಗಲು ಸಾಧ್ಯ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಎಲ್ಲಾ ಕೆಡುಕುಗಳಿಂದ ನಾವು ದೂರವಿರಬೇಕು ಎಂದರು. ಜಿ.ಐ.ಒ.ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕಿ ಉಮೈರಾ ಬಾನು ಸಂದರ್ಭೋಚಿತವಾಗಿ ಮಾತನಾಡಿದರು. ಸಲೀಮ ಪಾಣೆಮಂಗಳೂರು, ಸಮೀನ ಉಪ್ಪಿನಂಗಡಿ, ಆಶುರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದುರಫ್ ಶಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಐ.ಒ.ಸದಸ್ಯೆಯರು ಗಾಯನ ಹಾಡಿದರು. ಮಿಸ್ಬಾ ಹಾಗೂ ರೈಹಾನ ಕಾರ್ಯಕ್ರಮವನ್ನು ನಿರೂಪಿಸಿದರು. ತಶ್ರೀಫಾ ವಂದಿಸಿದರು.