ಇದು 'ಆಘಾತಕಾರಿ' ಕ್ರಮ: ಮಾನವಹಕ್ಕುಗಳ ಹೋರಾಟಗಾರ ಹರ್ಷ ಮಂದರ್

Update: 2017-09-14 14:43 GMT

ಹೊಸದಿಲ್ಲಿ, ಸೆ.14: ಗೋರಕ್ಷಕರಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಮೃತಪಟ್ಟ ಪೆಹ್ಲು ಖಾನ್ ಹೆಸರಿಸಿದ್ದ ಆರು ಜನರನ್ನು ಪ್ರಕರಣದಿಂದ ಕೈಬಿಟ್ಟಿರುವ ಕ್ರಮವನ್ನು ಸಾಮಾಜಿಕ ಹೋರಾಟಗಾರರು ಮತ್ತು ನಾಗರಿಕರು ಖಂಡಿಸಿದ್ದು, ರಾಜಸ್ತಾನ ಸರಕಾರ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪೆಹ್ಲು ಖಾನ್ ಹೆಸರಿಸಿದ್ದ 6 ಮಂದಿಗೆ ಗುರುವಾರ ಕ್ಲೀನ್ ಚಿಟ್ ನೀಡಲಾಗಿದ್ದು, ಇವರಲ್ಲಿ ಮೂವರು ಸಂಘಪರಿವಾರ ಸಂಘಟನೆಗೆ ಸೇರಿದವರಾಗಿದ್ದಾರೆ.

“ಈ ಕ್ರಮ ಖಂಡನೀಯ ಹಾಗೂ ಆಘಾತಕಾರಿಯಾಗಿದ್ದು, ಆದರೆ ನಿರೀಕ್ಷಿಸದೆ ಇರುವುದಲ್ಲ” ಎಂದು ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯೆ ಕವಿತಾ ಕೃಷ್ಣನ್ ಹೇಳಿದ್ದಾರೆ.

“ಆರೋಪಿಗಳಿಗೆ ಕ್ಲೀನ್ ಚಿಟ್ ನೀಡುವಲ್ಲಿ ಗೃಹ ಸಚಿವರು ಹಾಗೂ ರಾಜಸ್ಥಾನದ ಇತರ ಸಚಿವರ ಹಸ್ತಕ್ಷೇಪವಿದ್ದುದರಿಂದ ಇದನ್ನು ಮೊದಲೇ ನಿರೀಕ್ಷಿಸಲಾಗಿತ್ತು” ಎಂದವರು ಹೇಳಿದ್ದಾರೆ.

“ಇತ್ತೀಚಿನ ಗುಂಪುಹತ್ಯೆಯ ವಿಚಾರಣೆಯಲ್ಲಿ ವಿಧಾನವೊಂದನ್ನು ಅನುಸರಿಸಲಾಗುತ್ತದೆ. ಬಹುತೇಕ ಗುಂಪು ಹತ್ಯೆಯ ಪ್ರಕರಣಗಳಲ್ಲಿ ಸಂತ್ರಸ್ತರನ್ನು ಅಪರಾಧಿ ಪಕ್ಷವೆಂಬಂತೆ ನಡೆಸಿಕೊಳ್ಳಲಾಗುತ್ತದೆ ಹಾಗೂ ಆರೋಪಿಗಳನ್ನು ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತದೆ” ಎಂದು ಹಿರಿಯ ಮಾನವಹಕ್ಕುಗಳ ಹೋರಾಟಗಾರ, ಲೇಖಕ ಹರ್ಷ ಮಂದರ್ ಹೇಳಿದ್ದಾರೆ.

“ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಒತ್ತಡ ಹೇರಿದರೆ, ಅವರೂ ಸಹ ಸಂತ್ರಸ್ತರ ಮೇಲೆ ಪ್ರಕರಣ ದಾಖಲಿಸುತ್ತಾರೆ. ಆ ಆರು ಜನರಿಗೆ ಕ್ಲೀನ್ ಚಿಟ್ ನೀಡಿರುವುದು ಆಘಾತಕಾರಿಯಾಗಿದೆ” ಎಂದವರು ಹೇಳಿದ್ದಾರೆ.

“ಇದು ನಮಗೆ ಮಾಡಿದ ದ್ರೋಹವಾಗಿದೆ. ಅವರು ಹೇಳಿಕೆ ನೀಡುವಾಗ ನಾವೂ ಆರೋಪಿಗಳ ಹೆಸರುಗಳನ್ನು ಕೇಳಿದ್ದೇವೆ. ನಾವು ಮತ್ತೊಮ್ಮೆ ಹೋರಾಟ ನಡೆಸುತ್ತೇವೆ” ಎಂದು ಪೆಹ್ಲು ಖಾನ್ ರ ಪುತ್ರ ಇರ್ಶಾದ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News