×
Ad

ಎನ್‌ಸಿಇಆರ್‌ಟಿ ಪಠ್ಯಪುಸ್ತಕ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ

Update: 2017-09-14 20:37 IST

ಹೊಸದಿಲ್ಲಿ, ಸೆ.14: ಎನ್‌ಸಿಇಆರ್‌ಟಿ (ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಆ್ಯಂಡ್ ಟ್ರೈನಿಂಗ್) ಪಠ್ಯಪುಸ್ತಕಗಳ ಆನ್‌ಲೈನ್ ಬುಕ್ಕಿಂಗ್‌ಗೆ ಅವಕಾಶ ಮಾಡಿಕೊಡಲಾಗಿದ್ದು ತಿಂಗಳೊಳಗೆ 2.4 ಕೋಟಿ ಪುಸ್ತಕಗಳನ್ನು ಬುಕ್ಕಿಂಗ್ (ಮುಂಗಡ ಕಾಯ್ದಿರಿಸುವಿಕೆ ) ಮಾಡಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಪಠ್ಯಪುಸ್ತಕಗಳ ‘ಅಭಾವ’ ಸೃಷ್ಟಿಸುವ ಮೂಲಕ ಪೋಷಕರು ಖಾಸಗಿ ಪ್ರಕಾಶಕರಿಂದ ದುಬಾರಿ ಬೆಲೆಯ ಪುಸ್ತಕಗಳನ್ನು ಖರೀದಿಸಲು ಒತ್ತಡ ಹಾಕಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಎನ್‌ಸಿಇಆರ್‌ಟಿ ಕಳೆದ ತಿಂಗಳು ವೆಬ್‌ಪೋರ್ಟಲ್ ಆರಂಭಿಸಿ ಪಠ್ಯಪುಸ್ತಕಗಳ ಆನ್‌ಲೈನ್ ಬುಕ್ಕಿಂಗ್‌ಗೆ ಅವಕಾಶ ಮಾಡಿಕೊಟ್ಟಿತ್ತು.

ಇದುವರೆಗೆ 2018-19ರ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದ ಪಠ್ಯಪುಸ್ತಕದ 2.4 ಕೋಟಿಗೂ ಹೆಚ್ಚಿನ ಪ್ರತಿಗಳಿಗೆ ಬೇಡಿಕೆ ಲಭ್ಯವಾಗಿದೆ. ಸೆಪ್ಟೆಂಬರ್ 23ರವರೆಗೆ ಈ ಪೋರ್ಟಲ್‌ನಲ್ಲಿ ಬುಕ್ಕಿಂಗ್ ಚಾಲ್ತಿಯಲ್ಲಿರುತ್ತದೆ ಎಂದು ಎನ್‌ಸಿಇಆರ್‌ಟಿ ನಿರ್ದೇಶಕ ಹೃಷಿಕೇಷ್ ಸೇನಾಪತಿ ತಿಳಿಸಿದ್ದಾರೆ. ಕರ್ನಾಟಕದಿಂದ 37 ಲಕ್ಷ ಪುಸ್ತಕಗಳಿಗೆ, ಅರುಣಾಚಲ ಪ್ರದೇಶದಿಂದ 29 ಲಕ್ಷಕ್ಕೂ ಹೆಚ್ಚು ಪುಸ್ತಕಗಳಿಗೆ ಬೇಡಿಕೆ ಬಂದಿದೆ. ಖಾಸಗಿ ಹಾಗೂ ಸರಕಾರಿ ಶಾಲೆಗಳಿಂದ ಬೇಡಿಕೆ ಬಂದಿದೆ. ಕಳೆದ ವರ್ಷ ಒಟ್ಟು 4.63 ಕೋಟಿ ಪುಸ್ತಕ ಪ್ರಿಂಟ್ ಮಾಡಲಾಗಿದೆ. ಈ ವರ್ಷ ಸುಮಾರು 6 ಕೋಟಿ ಪುಸ್ತಕಗಳಿಗೆ ಬೇಡಿಕೆ ಬರಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಸೇನಾಪತಿ ತಿಳಿಸಿದ್ದಾರೆ. ಶಾಲೆಗಳು ತಮ್ಮ ಸಮೀಪದ ಎನ್‌ಸಿಇಆರ್‌ಟಿ ಪುಸ್ತಕ ಮಾರಾಟಗಾರರಿಂದ ಅಥವಾ ಪ್ರಾದೇಶಿಕ ಉತ್ಪಾದನೆ ಮತ್ತು ಪೂರೈಕೆ ಕೇಂದ್ರಗಳಿಂದ (ಅಹ್ಮದಾಬಾದ್, ಕೋಲ್ಕತ, ಗುವಾಹಟಿ ಮತ್ತು ಬೆಂಗಳೂರು) ಪಡೆಯಬಹುದಾಗಿದೆ . ಕಳೆದ ವರ್ಷ ಪಠ್ಯಪುಸ್ತಕದ ಕೊರತೆ ಇರಲಿಲ್ಲ. ಪುಸ್ತಕ ಮಾರಾಟಗಾರರು ಎನ್‌ಸಿಆರ್‌ಇಟಿ ಪಠ್ಯಪುಸ್ತಕಗಳನ್ನು ಸ್ಟಾಕ್ ಮಾಡಿಟ್ಟುಕೊಂಡು, ಖಾಸಗಿ ಪ್ರಕಾಶಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಆದರೆ ಈಗ ಎಲ್ಲರಿಗೂ ಸುಲಭವಾಗಿ ಪುಸ್ತಕಗಳ ಬಗ್ಗೆ ವಿವರ ಪಡೆಯಲು ಸಾಧ್ಯವಾಗುತ್ತದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News