ಎಂಐಟಿ: ವಿದ್ಯಾರ್ಥಿಗಳು ನಿರ್ಮಿಸಿದ ಸೌರಶಕ್ತಿ ಚಾಲಿತ ಕಾರು ಅನಾವರಣ
ಉಡುಪಿ, ಸೆ.14: ಮಣಿಪಾಲದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳು ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ನಿರ್ಮಿಸಿದ ಸೌರಶಕ್ತಿಯಿಂದ ಚಲಿಸುವ ನಾಲ್ಕು ಸೀಟುಗಳ ‘ಎಸ್‌ಎಂ-ಎಸ್1’ ಹೆಸರಿನ ಈ ಕಾರನ್ನು ಮಣಿಪಾಲ ವಿವಿಯ ಪ್ರೊ ಚಾನ್ಸಲರ್ ಡಾ. ಎಚ್.ಎಸ್.ಬಲ್ಲಾಳ್ ಗುರುವಾರ ಕಾಲೇಜಿನ ಆವರಣದಲ್ಲಿ ಅನಾವರಣ ಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಬಲ್ಲಾಳ್, ಸೌರಶಕ್ತಿ ಎಂಬುದು ಅತ್ಯಂತ ಸ್ವಚ್ಛ ಇಂಧನವಾಗಿದ್ದು, 2-3 ತಿಂಗಳು ಹೊರತು ಪಡಿಸಿದರೆ ವರ್ಷವಿಡೀ ಈ ಪ್ರದೇಶದಲ್ಲಿ ಲಭ್ಯವಿರುತ್ತದೆ. ಎಂಐಟಿಯ ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ನೆಚ್ಚಿಕೊಳ್ಳದೇ, ಇಂಥ ಹೊಸ ಹೊಸ ಅನ್ವೇಷಣೆಗಳನ್ನು ನಡೆಸುವ ಮೂಲಕ ಸಂಸ್ಥೆಗೆ ಹೆಸರು ತರುತಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಎಂ.ಪಾಟೀಲ್ ಮಾತನಾಡಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಪಠ್ಯದಿಂದ ಹೊರತಾದ ಇಂಥ ವಿನೂತನ ಅನ್ವೇಷಣೆ ನಡೆಸುವುದರಿಂದ ಅವರ ಭವಿಷ್ಯದೊಂದಿಗೆ ದೇಶದ ಭವಿಷ್ಯವೂ ಉಜ್ವಲಗೊಳ್ಳುವುದು ಎಂದರು.
ಎಂಐಟಿಯ ವಿದ್ಯಾರ್ಥಿ ರಿಷಬ್ ಪಹುಜಾ ನೇತೃತ್ವದಲ್ಲಿ 50 ವಿದ್ಯಾರ್ಥಿಗಳ ತಂಡ ಸೋಲಾರ್‌ಮೊಬಿಲ್ ಸರಣಿಯ ಮೊದಲ ಕಾರನ್ನು ನಿರ್ಮಿಸಿದ್ದು, ಡಾ.ಉಮಾನಂದ ಕೆ.ವಿ. ಪ್ರಾಧ್ಯಾಪಕ ಸಲಹೆಗಾರರಾಗಿದ್ದಾರೆ. ಸೋಲಾರ್ ಮೊಬಿಲ್ ತಂಡ ನಿರ್ಮಿಸುತ್ತಿರುವ ಮೂರನೇ ಕಾರು ಇದಾಗಿದ್ದು, ಮೊದಲ ನಾಲ್ಕು ಸೀಟುಗಳ ಕಾರಾಗಿದೆ. ಈ ಮೊದಲು ಸ್ಪರ್ಧೆಗಾಗಿ ಅವರು ಸೌರಶಕ್ತಿ ಚಾಲಿತ ಕಾರನ್ನು ನಿರ್ಮಿಸಿದ್ದರು.
ಎಂಐಟಿಯ ನಿರ್ದೇಶಕ ಹಾಗೂ ಮಣಿಪಾಲ ವಿವಿಯ ಪ್ರೊ ವೈಸ್ ಚಾನ್ಸಲರ್ ಡಾ.ಜಿ.ಕೆ.ಪ್ರಭು ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ, ಎಂಐಟಿಯ ವಜ್ರ ಮಹೋತ್ಸವ ಹಾಗೂ ನಾಳೆ ನಡೆಯುವ ಇಂಜಿನಿಯರ್ಸ್ ಡೇಗೆ ಪೂರ್ವಭಾವಿಯಾಗಿ ಈ ಕಾರನ್ನು ಇಂದು ಅನಾವರಣಗೊಳಿಸಲಾಗುತ್ತಿದೆ ಎಂದರು.
ಕಾಲೇಜಿನ ಏರೋನಾಟಿಕಲ್ ಎಂಡ್ ಅಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಸತೀಶ್ ಶೆಣೈ, ಜಂಟಿ ನಿರ್ದೇಶಕ ಡಾ.ಬಿ.ಎಚ್.ವಿ. ಪೈ, ಪ್ರೊ.ಬಾಲಕೃಷ್ಣ ಮುದ್ದೋಡಿ ಉಪಸ್ಥಿತರಿದ್ದರು.
ಎಂಐಟಿಯ ‘ಸೋಲಾರ ಮೊಬಿಲ್’ ತಂಡ ಈ ಎಸ್‌ಎಂ-ಎಸ್1 ಸೋಲಾರ್ ಕಾರನ್ನು ಸ್ಥಳೀಯವಾಗಿ ತಯಾರಿಸಿದೆ. ಕಾರಿಗೆ ಬೇಕಾದ ಸೋಲಾರ್ ಪ್ಯಾನೆಲ್‌ನ್ನು ಟಾಟಾ ಸೋಲಾರ್ ನೀಡಿದೆ. ಸೂರ್ಯನ ಬೆಳಕಿನಲ್ಲಿ ಸುಮಾರು 4ರಿಂದ 5ಗಂಟೆಗಳ ಕಾಲ ಚಾರ್ಜ್ ಆದ ಕಾರು ಗರಿಷ್ಠ ಗಂಟೆಗೆ 80 ಕಿ.ಮೀ. ವೇಗದಲ್ಲಿ 180 ಕಿ.ಮೀ. ಕ್ರಮಿಸಲಿದೆ.
ಕಳೆದ ವರ್ಷ ಸ್ಪರ್ಧೆಯೊಂದರಲ್ಲಿ ಭಾಗವಹಿಸಲು ಮೊದಲ ಬಾರಿ ನಿರ್ಮಿಸಲಾದ ಈ ಸೋಲಾರ್ ಕಾರನಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಲಾಗಿದೆ. ಇದೀಗ ನಾಲ್ವರು ಪ್ರಯಾಣಿಕರು ಆಸೀನರಾಗಬಹುದಾದ ಕಾರನ್ನು ಅಭಿವೃದ್ಧಿ ಪಡಿಸಿದ್ದು, ಮುಂದೆ ಇನ್ನಷ್ಟು ಅಭಿವೃದ್ಧಿಗೆ ಅವಕಾಶವಿದೆ ಎಂದು ರಿಷಬ್ ವಿವರಿಸಿದರು.