‘ವಾಟ್ ಹ್ಯಾಪನ್ಡ್’ನಲ್ಲಿ 2016ರ ಅಧ್ಯಕ್ಷೀಯ ಚುನಾವಣೆಯ ಅನುಭವಗಳನ್ನು ಬಿಚ್ಚಿಟ್ಟ ಹಿಲರಿ ಕ್ಲಿಂಟನ್

Update: 2017-09-14 17:58 GMT

ವಾಶಿಂಗ್ಟನ್, ಸೆ. 14: ಮಂಗಳವಾರ ಬಿಡುಗಡೆಗೊಂಡ ತನ್ನ ನೂತನ ಪುಸ್ತಕ ‘ವಾಟ್ ಹ್ಯಾಪನ್ಡ್’ನ ಪ್ರಚಾರಕ್ಕಾಗಿ 2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಹಿಲರಿ ಕ್ಲಿಂಟನ್ ಪ್ರವಾಸ ಕೈಗೊಂಡಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿನ ತನ್ನ ಅನುಭವ ಮತ್ತು ಡೊನಾಲ್ಡ್ ಟ್ರಂಪ್ ವಿರುದ್ಧ ತಾನು ಅನುಭವಿಸಿದ ಸೋಲಿನ ಬಗ್ಗೆ ಹಿಲರಿ ಈ ಪುಸ್ತಕದಲ್ಲಿ ಬರೆದಿದ್ದಾರೆ.

469 ಪುಟಗಳ ಪುಸ್ತಕದಲ್ಲಿ ಹಿಲರಿ, ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಬರ್ನೀ ಸ್ಯಾಂಡರ್ಸ್‌ರೊಂದಿಗಿನ ಸ್ಪರ್ಧೆಯಿಂದ ಹಿಡಿದು ತನ್ನ ಇಮೇಲ್ ಹಗರಣ ಮತ್ತು ಟ್ರಂಪ್ ವಿರುದ್ಧ ಅನುಭವಿಸಿದ ಸೋಲಿಗೆ ತಾನು ನೀಡಿದ ಪ್ರತಿಕ್ರಿಯೆವರೆಗಿನ ಹಲವಾರು ವಿಷಯಗಳ ಬಗ್ಗೆ ಬರೆದಿದ್ದಾರೆ.

ಸೋಲಿನ ಸುದ್ದಿ ಕೇಳಿ ತನ್ನ ಜಂಘಾಬಲವೇ ಉಡುಗಿತು ಎಂಬುದಾಗಿ ಹಿಲರಿ ತನ್ನ ಕಥಾನಕದಲ್ಲಿ ಬರೆದಿದ್ದಾರೆ.

‘‘ಇದಕ್ಕೆ ನಾನು ಮಾನಸಿಕವಾಗಿ ಸಿದ್ಧವಾಗಿಯೇ ಇರಲಿಲ್ಲ. ಇಂಥ ಪರಿಸ್ಥಿತಿ ಎದುರಾದರೆ ಏನು ಮಾತನಾಡಬೇಕು ಎಂದು ನಾನು ಕೊನೆಯ ಗಳಿಗೆಯವರೆಗೂ ಯೋಚಿಸಿರಲಿಲ್ಲ’’ ಎಂದು ಅವರು ಹೇಳಿದ್ದಾರೆ.

900 ವಿಮರ್ಶೆಗಳನ್ನು ಅಳಿಸಿಹಾಕಿದ ಅಮೆಝಾನ್

ಹಿಲರಿ ಕ್ಲಿಂಟನ್‌ರ ನೂತನ ಪುಸ್ತಕ ‘ವಾಟ್ ಹ್ಯಾಪನ್ಡ್’ ಕುರಿತ 900ಕ್ಕೂ ಅಧಿಕ ಆನ್‌ಲೈನ್ ವಿಮರ್ಶೆಗಳನ್ನು ‘ಅಮೆಝಾನ್.ಕಾಮ್’ ಅಳಿಸಿಹಾಕಿದೆ ಎನ್ನಲಾಗಿದೆ.

ಈ ವಿಮರ್ಶಕರು ಪುಸ್ತಕವನ್ನು ಓದಿಯೇ ಇಲ್ಲ ಎಂಬುದಾಗಿ ಪ್ರಕಾಶಕರು ಅಭಿಪ್ರಾಯಪಟ್ಟ ಬಳಿಕ ಅಮೆಝಾನ್ ಈ ಕ್ರಮ ತೆಗೆದುಕೊಂಡಿದೆ ಎನ್ನಲಾಗಿದೆ.

ಮಂಗಳವಾರದಿಂದ ಮಾರಾಟವಾಗುತ್ತಿರುವ ಪುಸ್ತಕವು ಈಗ 500ಕ್ಕೂ ಅಧಿಕ ಆನ್‌ಲೈನ್ ವಿಮರ್ಶೆಗಳನ್ನು ಹೊಂದಿದೆ. ಪುಸ್ತಕಕ್ಕೆ ಸರಾಸರಿ 5 ಸ್ಟಾರ್‌ಗಳ ರೇಟಿಂಗ್ ಲಭಿಸಿದೆ. ಈ ಎಲ್ಲ ವಿಮರ್ಶೆಗಳನ್ನು ಬರೆದವರು ‘ಪ್ರಮಾಣಿತ ಖರೀದಿದಾರರು’ ಎಂಬುದಾಗಿ ಅಮೆಝಾನ್ ವೆಬ್‌ಸೈಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News