ಕಚೇರಿಯಲ್ಲಿಯೇ ಕುಸಿದು ಬಿದ್ದ ಕುತ್ಯಾರು ವಿಎ: ಆಸ್ಪತ್ರೆಗೆ ದಾಖಲು
ಉಡುಪಿ, ಸೆ.14: ಭೂಪರಿವರ್ತನೆಗೆ ಸಂಬಂಧಿಸಿ ವ್ಯಕ್ತಿಯೊಬ್ಬರ ಬೆದರಿಕೆ ಕರೆಗೆ ಕುತ್ಯಾರು ಗ್ರಾಪಂ ಗ್ರಾಮ ಲೆಕ್ಕಾಧಿಕಾರಿ ಮಮತಾ(22) ಎಂಬವರು ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಕಚೇರಿಯಲ್ಲಿ ಕುಸಿದು ಬಿದ್ದು ಅಸ್ವಸ್ಥ ಗೊಂಡ ಘಟನೆ ನಡೆದಿದೆ.
ಮಮತಾ ಕಚೇರಿಯಲ್ಲಿದ್ದ ವೇಳೆ ವ್ಯಕ್ತಿಯೊಬ್ಬರು ದೂರವಾಣಿ ಕರೆ ಮಾಡಿ ಭೂಪರಿವರ್ತನೆಯ ವಿಚಾರದಲ್ಲಿ ಮಾತನಾಡಿದ್ದಾರೆನ್ನಲಾಗಿದೆ. ಈ ಸಂದರ್ಭ ಕರೆ ಮಾಡಿದ ವ್ಯಕ್ತಿ ಮಮತಾಗೆ ಅವಾಚ್ಯ ಶಬ್ದಗಳಿಂದ ಬೈದು ಶಾಸಕರಲ್ಲಿ ದೂರುವುದಾಗಿ ಬೆದರಿಕೆ ಹಾಕಿದ್ದಾರೆನ್ನಲಾಗಿದೆ.
ಇದರಿಂದ ಮಾನಸಿಕವಾಗಿ ನೊಂದ ಮಮತಾ ತೀವ್ರ ಅಸ್ವಸ್ಥಗೊಂಡು ಕಚೇರಿಯಲ್ಲಿಯೇ ಕುಸಿದು ಬಿದ್ದರೆನ್ನಲಾಗಿದೆ. ಕೂಡಲೇ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾ ಗುತ್ತಿದೆ. ಘಟನೆ ತಿಳಿದು ಕಾಪು ಶಾಸಕ ವಿನಯ ಕುಮಾರ್ ಸೊರಕೆ, ಕುಂದಾ ಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕಾರ್, ಉಡುಪಿ ತಾಲೂಕು ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷ ಪುನಿತ್, ಕಾರ್ಯದರ್ಶಿ ಕಾರ್ತೀಕೆಯ ಭಟ್ ಆಸ್ಪತ್ರೆಗೆ ಭೇಟಿ ನೀಡಿ ಮಮತಾರ ಆರೋಗ್ಯವನ್ನು ವಿಚಾರಿಸಿದರು.
‘ಮಮತಾ ತೀವ್ರ ಅಸ್ವಸ್ಥರಾಗಿರುವುದರಿಂದ ಘಟನೆಯ ವಿವರ ಇನ್ನೂ ಸ್ಪಷ್ಟ ವಾಗಿ ತಿಳಿದಿಲ್ಲ. ಆಕೆ ಚೇತರಿಸಿಕೊಂಡ ಬಳಿಕ ಈ ಕುರಿತು ಶಿರ್ವ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು. ಆಕೆ ಕಚೇರಿಯಲ್ಲಿರುವಾಗ ಭೂಪರಿ ವರ್ತನೆಗೆ ಸಂಬಂಧಿಸಿ ವ್ಯಕ್ತಿಯೊಬ್ಬರು ಕರೆ ಮಾಡಿ ಬೆದರಿಕೆ ಹಾಕಿದ ಪರಿಣಾಮ ಈ ರೀತಿ ಆಗಿದೆ. ಈ ಬಗ್ಗೆ ಸರಿಯಾಗಿ ತನಿಖೆ ನಡೆಸಿ ಬೆದರಿಕೆಯೊಡ್ಡಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರಗಿಸಬೇಕು. ಇಂದು ಗ್ರಾಮ ಲೆಕ್ಕಿಗರು ತೀವ್ರ ಒತ್ತಡದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ ಸರಕಾರ ಅವರ ಬಗ್ಗೆ ಹೆಚ್ಚು ಗಮನಕೊಡಬೇಕು’ ಎಂದು ಸಂಘದ ಅಧ್ಯಕ್ಷ ಪುನಿತ್ ಆಗ್ರಹಿಸಿದರು.
ಮೂಲತಃ ಪಣಿಯೂರು ಕುಂಜೂರಿನ ಸುಂದರ ದೇವಾಡಿಗ ಎಂಬವರ ಪುತ್ರಿ ಮಮತಾ ಕಳೆದ ನಾಲ್ಕು ವರ್ಷಗಳಿಂದ ಕುತ್ಯಾರು ಗ್ರಾಪಂನಲ್ಲಿ ಗ್ರಾಮ ಲೆಕ್ಕಿಗರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಇವರು ಕುಟುಂಬ ಕಾಪು ಸರಕಾರಿ ವಸತಿ ಗೃಹದಲ್ಲಿ ವಾಸವಾಗಿದೆ.