ಸ್ನೇಹಿತನ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ
ಕುಂದಾಪುರ, ಸೆ.14: ಎರಡು ವರ್ಷಗಳ ಹಿಂದೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ಕಡ ಎಂಬಲ್ಲಿ ಸ್ನೇಹಿತನನ್ನು ಕೊಲೆಗೈದ ಪ್ರಕರಣದ ಅಪರಾಧಿಗೆ ಕುಂದಾಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಸಾಲಿಗ್ರಾಮ ಸಮೀಪದ ಕಾರ್ಕಡದ ಶರತ್ ಪೂಜಾರಿ ಶಿಕ್ಷೆಗೆ ಗುರಿಯಾದ ಅಪರಾಧಿ.
2015ರ ಫೆ.2ರಂದು ಕಾರ್ಕಡದ ವಿಜಯ ಕಾರಂತ(31) ಎಂಬವರನ್ನು ಆತನ ಗೆಳೆಯ ನೆರೆಮನೆಯ ಶರತ್ ಪೂಜಾರಿ ಅನೈತಿಕ ಸಂಬಂಧ ಶಂಕಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದನು.
ಆಗಿನ ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ಬಿ. ನಾಯಕ್ ಪ್ರಕರಣದ ತನಿಖೆಗೆ ನಡೆಸಿ ಆರೋಪಿಯನ್ನು ಬಂಧಿಸಿ, ನಂತರ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯದ ನ್ಯಾಯಧೀಶ ಪ್ರಕಾಶ್ ಕೆ. ಆರೋಪಿ ಮೇಲಿನ ಆರೋಪ ಸಾಬೀತಾ ಗಿರುವುದಾಗಿ ಅಭಿಪ್ರಾಯ ಪಟ್ಟು, ಸೆಕ್ಷನ್ 302ರ ಪ್ರಕಾರ ಜೀವಾವಧಿ ಕಾರಗೃಹ ಶಿಕ್ಷೆ ಹಾಗೂ 40,000 ರೂ. ದಂಡ ಮತ್ತು ಸೆಕ್ಷನ್ 201 ಪ್ರಕಾರ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಾರಂಭದಲ್ಲಿ ಸರಕಾರಿ ಅಭಿಯೋಜಕ ಶ್ರೀನಿವಾಸ ಹೆಗ್ಡೆ, ಬಳಿಕ ಹರಿಶ್ಚಂದ್ರ ಉದ್ಯಾರ ಸರಕಾರದ ಪರ ವಾದಿಸಿದ್ದರು.