×
Ad

ದೇಯಿ ಬೈದೆತಿ ಮೂರ್ತಿಗೆ ಅವಮಾನಕ್ಕೆ ಖಂಡನೆ: ಮುಸ್ಲಿಂ ಮುಖಂಡರ ಸಭೆ

Update: 2017-09-14 22:23 IST

ಪುತ್ತೂರು, ಸೆ. 14: ದೇಯಿ ಬೈದೆತಿ ಪ್ರತಿಮೆಗೆ ಅವಮಾನ ಮಾಡಿರುವ ವಿಚಾರ ಖಂಡನೀಯವಾಗಿದ್ದು ಇದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ, ಧರ್ಮದ ವಿಚಾರದಲ್ಲಿ ನಂಬಿಕೆಯನ್ನು ಘಾಸಿಗೊಳಿಸುವ ಕೃತ್ಯಕ್ಕೆ ಯಾರೂ ಇಳಿಯಬಾರದು ಪ್ರತಿಯೊಬ್ಬರೂ ಅವರವರ ಧರ್ಮವನ್ನು ಅನುಸರಿಸುವುದರ ಜೊತೆಗೆ ಇತರ ಧರ್ಮಗಳ ಬಗ್ಗೆ ಗೌರವ ಹೊಂದಬೇಕು ಪ್ರಸ್ತುತ ದೇಯಿ ಬೈದೆತಿ ವಿಗ್ರಹ ಅವಮಾನ ವಿಚಾರದಲ್ಲಿ ನಮಗೂ ಅತೀವ ಬೇಸರವಿದೆ ಎಂದು ಸಯ್ಯದ್ ಹಸನ್ ಅಬ್ದುಲ್ಲ ಕೋಯ ತಂಙಳ್ ಹೇಳಿದರು.

ದೇಯಿ ಬೈದೆತಿಯವರ ಪ್ರತಿಮೆಗೆ ಮಾಡಲಾದ ಅವಮಾನ ಖಂಡಿಸಿ ಈಶ್ವರಮಂಗಲದ ಹಿರಾ ಕಾಂಪ್ಲೆಕ್ಸ್ ಬಳಿ ಬುಧವಾರ ಮುಸ್ಲಿಂ ಮುಖಂಡರು ನಡೆಸಿದ ಸಭೆಯಲ್ಲಿ ಅವರು ಮಾತನಾಡಿ ಯಾವ ಧರ್ಮವೂ ಇನ್ನೊಂದು ಧರ್ಮವನ್ನು ಅವಮಾನಿಸಲು ಕಲಿಸುವುದಿಲ್ಲ, ಎಲ್ಲರೂ ಪರಸ್ಪರ ಸೌಹಾರ್ದಯುತವಾಗಿ ಬಾಳಲು ಧರ್ಮಗಳೆಲ್ಲವೂ ಕರೆ ನೀಡುತ್ತಿದೆ ಕೆಲವರು ಮಾಡುವ ತಪ್ಪಿನಿಂದಾಗಿ ಎಲ್ಲರಿಗೂ ತೊಂದರೆಯಾಗುತ್ತದೆ, ಧರ್ಮವನ್ನು ಸರಿಯಾಗಿ ತಿಳಿಯದೇ ಇರುವುದೇ ಇಂತಹ ಅನಾಹುತಗಳಿಗೆ ಪ್ರಮುಖ ಕಾರಣ ಎಂದು ಹೇಳಿದರು.

ಈಶ್ವರಮಂಗಲದ ಉದ್ಯಮಿ ಅಬ್ದುಲ್ ರಹ್ಮಾನ್ ಹಾಜಿ ಮೇನಾಲ ಮಾತನಾಡಿ ಧರ್ಮದಲ್ಲಿ ಮತ್ತು ದೇವರಲ್ಲಿ ನಂಬಿಕೆ ಇರುವ ಯಾರೂ ಇಂತಹ ಕೆಲಸ ಮಾಡಲು ಸಾಧ್ಯವಿಲ್ಲ, ಇನ್ನೊಂದು ಧರ್ಮದ ಭಾವನೆಗೆ ನೋವು ಕೊಡುವುದು ಅಕ್ಷಮ್ಯವಾಗಿದ್ದು ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ, ದೇಯಿ ಬೈದೆತಿಯವರ ವಿಗ್ರಹಕ್ಕೆ ಮಾಡಲಾದ ಅವಮಾನವನ್ನು ನಾವೆಲ್ಲರೂ ಖಂಡಿಸುತ್ತೇವೆ ಎಂದು ಹೇಳಿದರು.

ಮೊಬೈಲ್, ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲೇ ಇಂದು ಕಾಲ ಕಳೆಯುವ ಹಲವರಿಗೆ ಅದುವೇ ಒಂದು ಧರ್ಮವಾದಂತಿದೆ, ಧರ್ಮವಿರೋದಿ ಕೃತ್ಯದ ಮೂಲಕ ಅನಾಹುತ ಸೃಷ್ಟಿಸುವವರಿಗೆ ನಮ್ಮ ವಿರೊಧವಿದೆ, ನಮ್ಮ ಊರಿನ ಶಾಂತಿ ಸಾಮರಸ್ಯ ನಮಗೆ ಮುಖ್ಯವಾಗಿದೆ ಎಂದು ಅವರು ಹೇಳಿದರು. ಪ್ರತೀ ಧರ್ಮದವರಿಗೂ ಅವರದೇ ಆದ ನಂಬಿಕೆ, ಗೌರವ ಇರುತ್ತದೆ ಅದನ್ನು ಅವಮಾನಿಸುವ ಕೃತ್ಯ ನಡೆದಾಗ ನೋವು ಆಗಿಯೇ ಆಗುತ್ತದೆ ಈ ನಿಟ್ಟಿನಲ್ಲಿ ಅವಾಂತರ ಉಂಟು ಮಾಡುವ ಯುವಕರು ಜಾಗ್ರತೆ ವಹಿಸಬೇಕು ಎಂದು ಅವರು ಹೇಳಿದರು.

ಪಾಳ್ಯತ್ತಡ್ಕ ಮಸೀದಿಯ ಉಪಾಧ್ಯಕ್ಷ ಹಿರಾ ಮುಹಮ್ಮದ್ ಮುಸ್ಲಿಯಾರ್ ಮಾತನಾಡಿ ಇಸ್ಲಾಂ ಶಾಂತಿಯ ಧರ್ಮವಾಗಿದ್ದು ಇನ್ನೊಂದು ಧರ್ಮವನ್ನು ನಿಂದಿಸುವುದನ್ನು, ಅವಮಾನಿಸುವುದನ್ನು ಸ್ಪಷ್ಟವಾಗಿ ವಿರೋಧಿಸುತ್ತದೆ, ಇಂದು ವಾಟ್ಸಾಪ್, ಫೇಸ್‌ಬುಕ್ ಮೂಲಕ ಕೆಲವರು ಅವಾಂತರ ಸೃಷ್ಟಿಸುವ ಮೂಲಕ ಸಮಾಜದಲ್ಲಿ ಗೊಂದಲಕ್ಕೆ ಕಾರಣವಾಗುತ್ತಿದ್ದಾರೆ ಎಂದು ಹೇಳಿದರು.

ಜಯಕರ್ನಾಟಕ ಮುಖಂಡ ಅಬ್ದುಲ್ಲ ಮೆನಸಿನಕಾನ ಮಾತನಾಡಿ ದೇಯಿ ಬೈದೇತಿಯವರ ವಿಗ್ರಹಕ್ಕೆ ಮಾಡಿರುವ ಅವಮಾನ ಖಂಡನೀಯ, ನೆ.ಮುಡ್ನೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ಶಾಂತಿ, ಸೌಹಾರ್ದತೆಯಿದ್ದು ಅದಕ್ಕೆ ಧಕ್ಕೆ ಬಾರದಂತೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಪ್ರಮುಖರಾದ ಬಿ.ಟಿ ಹಸೈನಾರ್, ಯೂಸುಫ್ ಬಿ.ಸಿ, ಅಬ್ದುಲ್ಲ ಹಾಜಿ ಹಿರಾ, ಆದಂ ಮೀನಾವು, ಪಿ.ಎ ಮುಹಮ್ಮದ್ ಮುಸ್ಲಿಯಾರ್, ಅಶ್ರಫ್ ಕುದ್ರೋಳಿ, ಇಬ್ರಾಹಿಂ ಮೀನಾವು, ಖಾದರ್ ಕಲ್ಲಗುಡ್ಡೆ, ಇಬ್ರಾಹಿಂ ಹಾಜಿ ತೈವಳಪ್ಪು, ಆದಂ ಮೀನಾವು, ಸೂಫಿ ಮೀನಾವು, ಪಿ.ಎ ಅಬ್ದುಲ್ಲ ಹಾಜಿ, ಮುಹಮ್ಮದ್ ಹಾಜಿ ಈಂದ್‌ಮೂಲೆ, ಹಸೈನಾರ್ ಎನ್.ಎಸ್, ಯೂಸುಫ್ ಚಪ್ಪಳ್ ಬಜಾರ್, ಅಬ್ದುಲ್ಲ ಕಲ್ಲಗುಡ್ಡೆ, ಮುಸ್ತಫಾ ಕುದ್ರೊಳಿ, ಮುಹಮ್ಮದ್ ಹಾಜಿ ಕನ್ನಡ್ಕ, ಹಮೀದ್ ಹಾಗೂ ಜ್ಯೂಸ್ ಸೆಂಟರ್‌ನ ಮುಹಮ್ಮದ್ ಮತ್ತಿತತರು ಉಪಸ್ಥಿತರಿದ್ದರು. ಪಿ.ಎ ಅಬ್ದುಲ್ಲ ಹಾಜಿ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News