ಶೈಕ್ಷಣಿಕ ವಿವಿಧ ಯೋಜನೆಗಳು ಸದುಪಯೋಗವಾಗಲಿ: ಸಚಿವ ಕಾಗೋಡು
ಬಂಟ್ವಾಳ, ಸೆ. 14: ರಾಜ್ಯದಲ್ಲಿ ಎಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕು ಎಂಬ ನಿಟ್ಟಿನಲ್ಲಿ ಸರಕಾರ ಶೈಕ್ಷಣಿಕವಾಗಿ ವಿವಿಧ ಯೋಜನೆಗಳನ್ನು ರೂಪಿಸಿದೆ. ವಿದ್ಯಾ ಸಂಸ್ಥೆಗಳು ಈ ಯೋಜನೆಗಳನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಂದಾಯ ಸಚಿ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಅವರು ತಾಲೂಕಿನ ಮೊಡಂಕಾಪು ಕಾರ್ಮೆಲ್ ಪದವಿ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಸ್ಪರ್ಧೆ "ಯುಪೋರಿಯಾ-2017" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಹಾರ ಸಚಿವ ಯು. ಟಿ. ಖಾದರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಸೌಹಾರ್ದತೆ ಮತ್ತು ನೈಜ ದೇಶ ಪ್ರೇಮ ಕಲಿಸುವ ವಿದ್ಯಾ ಸಂಸ್ಥೆಯಾಗಿ ಕಾರ್ಮೆಲ್ ಶಿಕ್ಷಣ ಸಂಸ್ಥೆಯು ಮೂಡಿ ಬಂದಿದೆ ಎಂದರು. ಕಾಲೇಜಿನ ಪ್ರಾಂಶುಪಾಲೆ ಭಗಿನಿ ಎಂ.ಸುಪ್ರಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾಧಿಕಾರಿ ಡಾ. ಕೆ. ಜಿ. ಜಗದೀಶ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರವಿ, ಕೆನರಾ ಇಂಜಿನಿಯರಿಂಗ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ. ಪ್ರಿಯಾ ಕಾರ್ಲೊ, ಉಪ ಪ್ರಾಂಶುಪಾಲೆ ಭಗಿನಿ ಕ್ಲೇರಾ, ಕಾರ್ಯಕ್ರಮ ಸಂಯೋಜಕಿ ಪೂಜಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಫಸೀಹ ಖತೀಜಾ ಸ್ವಾಗತಿಸಿ, ಶ್ವೇತಾ ವಂದಿಸಿದರು. ಕಾರ್ಯದರ್ಶಿ ವಿಪಿನ್ ಕ್ರಾಸ್ತ ಮತ್ತು ಜೊತೆ ಕಾರ್ಯದರ್ಶಿ ಎರಿಕಾ ಕಾರ್ಯಕ್ರಮ ನಿರೂಪಿಸಿದರು.