ಕೋಮು ಪ್ರಚೋದನೆ: ಅರುಣ್ ಕುಮಾರ್ ಪುತ್ತಿಲ ಬಂಧನಕ್ಕೆ ಎಸ್‌ಡಿಪಿಐ ಆಗ್ರಹ
ಪುತ್ತೂರು, ಸೆ.14: ಪುತ್ತೂರು ತಾಲೂಕಿನಾದ್ಯಂತ ಇತ್ತೀಚಿನ ದಿನಗಳಲ್ಲಿ ನಡೆದ ಕೆಲವೊಂದು ಪ್ರಕರಣಗಳಿಗೆ ಕೋಮು ಬಣ್ಣವನ್ನು ಹಚ್ಚಿ , ಒಂದು ಸಮುದಾಯದ ಮೇಲೆ ಹಿಂದೂ ಸಮಾಜವನ್ನು ಎತ್ತಿಕಟ್ಟಿ ಶಾಂತಿ ಕದಡುವ ಹುನ್ನಾರ ನಡೆಸುತ್ತಿರುವ ಹಾಗೂ ಕೋಮು ಗಲಭೆಗೆ ಸಂಚು ರೂಪಿಸುತ್ತಿರುವ ಸಂಘ ಪರಿವಾರದ ಮುಖಂಡ ಅರುಣ್‌ಕುಮಾರ್ ಪುತ್ತಿಲ ಅವರನ್ನು ಕೂಡಲೇ ಮುಂಜಾಗ್ರತಾ ಕ್ರಮವಾಗಿ ಬಂಧಿಸಿ, ಅವರ ವಿರುದ್ದ ಕಠಿಣ ಕಾನೂನು ಕ್ರಮಕೈಗೊಳ್ಳುವ ಮೂಲಕ ತಾಲೂಕಿನಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವ ಕೆಲಸ ಮಾಡಬೇಕು ಎಂದು ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಅವರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದರು.
ಪುತ್ತೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಬಿಜೆಪಿ ನೆಲಕಚ್ಚುವ ಪರಿಸ್ಥಿತಿಯಲ್ಲಿದ್ದು, ಈ ಭಾಗದಲ್ಲಿ ನೆಲೆ ಕಂಡುಕೊಳ್ಳುವ ಉದ್ದೇಶದಿಂದ ಅರುಣ್‌ಕುಮಾರ್ ಪುತ್ತಿಲ ಅವರ ನೇತೃತ್ವದಲ್ಲಿ ಧರ್ಮವನ್ನು ಮುಂದಿಟ್ಟುಕೊಂಡು ಶಾಂತಿ ಕದಡುವ ಹುನ್ನಾರ ನಡೆಯುತ್ತಿದೆ. ಬಿಜೆಪಿ, ಸಂಘ ಪರಿವಾರ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ಅರುಣ್‌ಕುಮಾರ್ ಪುತ್ತಿಲ ಅವರನ್ನು ಮುಂದಿಟ್ಟುಕೊಂಡು ಈ ಕೆಲಸವನ್ನು ಮಾಡಿಸುತ್ತಿದೆ ಎಂದು ತಿಳಿಸಿದರು.
ಲವ್ ಜಿಹಾದಿ ಪ್ರಕರಣದಲ್ಲಿ ನಮ್ಮ ಸಂಘಟನೆಯ ಯಾವುದೇ ಪಾತ್ರವಿಲ್ಲ. ಪಾಲ್ತಾಡಿನಲ್ಲಿ ನಡೆದ ಅನ್ಯಕೋಮಿನ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಸೆ.10ರಂದು ಅಂಕತ್ತಡ್ಕದಲ್ಲಿ ನಡೆದ ಸಂಕಲ್ಪ ಸಮಾವೇಶದಲ್ಲಿ ಅರುಣ್‌ಕುಮಾರ್ ಪುತ್ತಿಲ ಅವರು ಒಂದು ಧರ್ಮವನ್ನು ಮುಂದಿಟ್ಟುಕೊಂಡು ಇನ್ನೊಂದು ಧರ್ಮವನ್ನು ನಿಂದಿಸುವ ಕೋಮು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಹಿಂದೂಗಳು ಹಿಂದೂಗಳೊಂದಿಗೆ ಮಾತ್ರ ವ್ಯಾಪಾರ ಮಾಡಬೇಕೆನ್ನುವ ಮೂಲಕ ಅನ್ಯೋನ್ಯತೆಯಿಂದ ಇರುವ ಹಿಂದೂ ಮುಸ್ಲಿಮರ ನಡುವೆ ಒಡಕುಂಟು ಮಾಡಿ ಮತೀಯ ಸಂಘರ್ಷ ನಡೆಸಲು ಪ್ರೇರೇಪಿಸಿದ್ದಾರೆ ಎಂದು ಅವರು ತಿಳಿಸಿದರು.
ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿ ಅವಹೇಳನ ಮಾಡಿದ ಆರೋಪಿಯ ಕೃತ್ಯವನ್ನು ಎಸ್‌ಡಿಪಿಐ ಖಂಡಿಸುತ್ತದೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಪುತ್ತೂರಿನ ಬಸ್ ನಿಲ್ದಾಣದ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅರುಣ್‌ಕುಮಾರ್ ಪುತ್ತಿಲ ಅವರು ಈ ಕೃತ್ಯದಲ್ಲಿ ಹಲವು ಸಂಘಟನೆಗಳ ಮತ್ತು ಎಸ್‌ಡಿಪಿಐ ಪಕ್ಷದ ಕೈವಾಡವಿದೆ ಎಂದು ನಿರಾಧಾರ ಸುಳ್ಳು ಆರೋಪ ಮಾಡಿ ಅಮಾಯಕ ಮುಗ್ಧ ಜನರ ಮನಸ್ಸಿನಲ್ಲಿ ಕೋಮು ದ್ವೇಷ ಸೃಷ್ಠಿಸುವ ಜೊತೆಗೆ ಪಕ್ಷದ ಮೇಲೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿದ್ದಾರೆ. ಪ್ರೇಕ್ಷಣೀಯ ಸ್ಥಳವಾದ ದೇಯಿ ಬೈದೆತಿ ಔಷಧಿಯ ವನಕ್ಕೆ ಹಿಂದೂಯೇತರರ ಪ್ರವೇಶ ನಿಷೇಧಿಸಬೇಕೆನ್ನುವ ಮೂಲಕ ಒಬ್ಬ ಮಾಡಿದ ತಪ್ಪಿಗಾಗಿ ಇಡೀ ಸಮುದಾಯದ ಮೇಲೆ ಆರೋಪ ಮಾಡುವ ನೀಚ ಕೆಲಸಕ್ಕೆ ಕೈಹಾಕಿದ್ದಾರೆ ಎಂದರು.
ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳಿಂದೀಚೆಗೆ ಪ್ರಕ್ಷುಬ್ಧ ವಾತಾವರಣ ಸೃಷ್ಠಿಯಾಗಿದ್ದರೂ ಪುತ್ತೂರು ತಾಲ್ಲೂಕಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಇಲ್ಲಿನ ವಾತಾವರಣ ಶಾಂತಿಯುತವಾಗಿದ್ದರೂ ಇದೀಗ ರಾಜಕೀಯ ಲಾಭಕ್ಕಾಗಿ ಸಂಘ ಪರಿವಾರದ ಅರುಣ್‌ಕುಮಾರ್ ಪುತ್ತಿಲ ನೇತೃತ್ವದ ತಂಡ ಶಾಂತಿ ಕದಡುವ ಪ್ರಯತ್ನ ನಡೆಸುತ್ತಿದೆ. ಆದರೆ ಎಸ್‌ಡಿಪಿಐ ಪಕ್ಷ ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದರು.
ಅರುಣ್ ಕುಮಾರ್ ಪುತ್ತಿಲ ಅವರ ವಿರುದ್ದ ಕ್ರಮಕೈಗೊಂಡು ಶಾಂತಿ ಕಾಪಾಡುವ ವಿಚಾರದಲ್ಲಿ ನಿರ್ಲಕ್ಷ್ಯವಹಿಸಿದರೆ ತಾಲ್ಲೂಕಿನಲ್ಲಿ ನಡೆಯಬಹುದಾದ ಎಲ್ಲಾ ಅಹಿತಕರ ಘಟನೆಗಳಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೇ ನೇರ ಹೊಣೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಅಬ್ದುಲ್ ಹಮೀದ್ ಮೆಜೆಸ್ಟಿಕ್, ಉಪಾಧ್ಯಕ್ಷ ಇಬ್ರಾಹಿಂ ಸಾಗರ್, ಕೋಶಾ ಧಿಕಾರಿ ಮುಹಮ್ಮದ್ ಪಿ.ಬಿ.ಕೆ, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಸಂಶುದ್ದೀನ್ ಈಶ್ವರಮಂಗಲ ಉಪಸ್ಥಿತರಿದ್ದರು.