ವೃದ್ದರೊಬ್ಬರಿಗೆ ನಂಬಿಸಿ ವಂಚನೆ: ದೂರು
ಪುತ್ತೂರು, ಸೆ. 14: ಔಷಧಿಗಾಗಿ ಪೇಟೆಗೆ ಬಂದಿದ್ದ ವೃದ್ಧರೊಬ್ಬರ ಬಳಿಗೆ ಬಂದು ಆಧಾರ್ ಲಿಂಕ್ ವಿಚಾರ ಪ್ರಸ್ತಾಪಿಸಿ ವಿಶ್ವಾಸಗಿಟ್ಟಿಸಿಕೊಂಡ ಅಪರಿಚಿತನೊಬ್ಬ ಅವರ ಬಳಿಯಿದ್ದ ಚಿನ್ನದ ಆಭರಣ, ನಗದು ಲಪಟಾಯಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಕುರಿಯ ಗ್ರಾಮದ ಕುರಿಯ ನಿವಾಸಿ ಹುಕ್ರಪ್ಪ ನಾಯ್ಕ(73) ವಂಚನೆಗೊಳಗಾದವರು. ಪುತ್ತೂರಿನ ಬಸ್ ನಿಲ್ದಾಣದ ಸಮೀಪವಿರುವ ಔಷಧಾಲಯಕ್ಕೆ ಬಂದಿದ್ದ ಹುಕ್ರಪ್ಪ ನಾಯ್ಕ ಅವರು ಔಷಧಿ ಪಡೆದುಕೊಂಡು ಹಿಂತಿರುಗುವ ಸಿದ್ಧತೆಯಲ್ಲಿದ್ದ ವೇಳೆ ಅಲ್ಲಿಗೆ ಬಂದ ಅಪರಿಚಿತನೊಬ್ಬ ’ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ, ವೋಟರ್ ಐಡಿ ಎಲ್ಲ ಸರಿಯಿದೆಯೇ ಎಂದು ಕೇಳಿ ತಾನು ಆ ವ್ಯವಸ್ಥೆಯನ್ನು ಸರಿಪಡಿಸಿಕೊಡುವುದಾಗಿ ನಂಬಿಸಿದ್ದ. ಆತನ ಮಾತಿಗೆ ಮೋಡಿಗೆ ಮರುಳಾದ ಹುಕ್ರಪ್ಪ ನಾಯ್ಕ ಅವರು ತನ್ನ ಮನೆಗೆ ಹೋಗಿ ಆಧಾರ್ ಕಾರ್ಡ್, ವೋಟರ್ ಐಡಿಯನ್ನು ತಂದು ಅಲ್ಲೇ ಕಾದು ಕುಳಿತಿದ್ದ ಆತನ ಕೈಗೆ ನೀಡಿದ್ದರು.
ಈ ಸಂರ್ಭದಲ್ಲಿ ನನ್ನ ಅಜ್ಜನಿಗೂ ನಿಮ್ಮ ಕಿವಿಯಲ್ಲಿರುವಂತದ್ದೇ ಚಿನ್ನದ ಟಿಕ್ಕಿ ಮಾಡಲಿಕ್ಕಿದೆ. ಆದ್ದರಿಂದ ನಿಮ್ಮ ಕಿವಿಯಲ್ಲಿರುವ ಚಿನ್ನದ ಆಭರಣವನ್ನೊಮ್ಮೆ ನನಗೆ ಕೊಡಿ. ನಾನು ಜ್ಯುವೆಲ್ಲರಿಗೆ ಹೋಗಿ ತೋರಿಸಿ ಬರುತ್ತೇನೆ. ನಾನು ಹಿಂತಿರುಗಿ ಬರುವ ತನಕ ನನ್ನಲ್ಲಿರುವ ಚಿನ್ನದ ಬೆಂಡೋಲೆ ನಿಮ್ಮಲ್ಲಿರಲಿ ಎಂದು ನಂಬಿಸಿ ನಕಲಿ ಬೆಂಡೋಲೆಯೊಂದನ್ನು ಅವರ ಕೈಗೆ ನೀಡಿದ್ದ. ಅಲ್ಲದೆ ಆಧಾರ್ ಕಾರ್ಡ್ ಲಿಂಕ್ ಮತ್ತು ವೋಟರ್ ಐಡಿ ಸರಿಪಡಿಸುವ ಸಲುವಾಗಿ ರೂ.400 ನ್ನು ಮುಂಗಡವಾಗಿ ಪಡೆದುಕೊಂಡು ಅಲ್ಲಿಂದ ಜ್ಯುವೆಲ್ಲರಿ ಅಂಗಡಿಗೆಂದು ಹೊರಟು ಹೋಗಿದ್ದ.
ಆತನ ನಯವಾದ ಮಾತನ್ನು ನಿಜವೆಂದೇ ನಂಬಿದ್ದ ಹುಕ್ರಪ್ಪ ಅವರು ಆತ ನೀಡಿದ ನಕಲಿ ಬೆಂಡೋಲೆಯನ್ನು ಹಿಡಿದುಕೊಂಡು ಗಂಟೆಗಟ್ಟಲೆ ಕಾದು ಕುಳಿತರೂ ಆತ ಬರಲೇ ಇಲ್ಲ. ಕೊನೆಗೆ ಅವರಿಗೆ ತಾನು ಮೋಸ ಹೋಗಿರುವುದು ಅರಿವಿಗೆ ಬಂತು. ಬಳಿಕ ಅವರು ಈ ವಿಚಾರವನ್ನು ಮನೆಯವರಿಗೆ ತಿಳಿಸಿದ್ದು, ಬಳಿಕ ಘಟನೆಯ ಕುರಿತು ಪುತ್ತೂರು ನಗರ ಠಾಣೆಗೆ ದೂರು ನೀಡಲಾಯಿತು. ಪುತ್ತೂರು ನಗರ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.