ಬ್ಯಾಂಕ್‌ಗೆ 24 ಕೋ.ರೂ. ವಂಚನೆ: ಇಬ್ಬರು ಉದ್ಯಮಿಗಳಿಗೆ ಜಾಮೀನು ನಿರಾಕರಣೆ
Update: 2017-09-14 22:40 IST
ಹೊಸದಿಲ್ಲಿ, ಸೆ. 14: ಜಾಮೀನು ನೀಡಿದರೆ ನಡೆಯುತ್ತಿರುವ ತನಿಖೆಗೆ ಅಡ್ಡಿ ಉಂಟಾಗಬಹುದು ಎಂದು ಹೇಳಿರುವ ವಿಶೇಷ ನ್ಯಾಯಾಲಯ, ಬ್ಯಾಂಕ್‌ಗೆ 24 ಕೋ. ರೂ.ಗೂ ಅಧಿಕ ವಂಚಿಸಿದ ಇಬ್ಬರು ಉದ್ಯಮಿಗಳಿಗೆ ಜಾಮೀನು ನೀಡಲು ಇಂದು ನಿರಾಕರಿಸಿದೆ. ದಿಲ್ಲಿ ಮೂಲದ ಕಂಪೆನಿ ಮೆಸರ್ಸ್ ರಕ್ಷಾ ಗ್ಲೋಬಲ್ ಸ್ಟೀಲ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾದ ಸುಮಿತ್ ಸಿಂಗ್ಲಾ ಹಾಗೂ ವಿಕಾಸ್ ಸಿಂಗ್ಲಾ ಅವರ ಜಾಮೀನು ಅರ್ಜಿಯನ್ನು ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಮೂರ್ತಿ ವಿರೇಂದರ್ ಕುಮಾರ್ ತಿರಸ್ಕರಿಸಿದ್ದಾರೆ.
ವಿವಿಧ ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ಆರೋಪಿಗಳು ಇದೇ ಕಾರ್ಯ ವಿಧಾನ ಅನುಸರಿಸಿದ್ದಾರೆ. ಅವರ ವಿರುದ್ಧ 20 ಚೆಕ್‌ಗಳು ಅಮಾನತುಗೊಂಡ ಪ್ರಕರಣಗಳು ಬಾಕಿ ಇವೆ ಎಂದು ನ್ಯಾಯಾಲಯ ಹೇಳಿದೆ.
ಆರೋಪಿಗಳು ವಿವಿಧ ಬ್ಯಾಂಕ್‌ಗಳಿಗೆ 108 ಕೋಟಿ ರೂ. ವಂಚಿಸಿದ್ದಾರೆ. ಆದುದರಿಂದ ಜಾಮೀನು ನೀಡಬಾರದು ಎಂದು ಸಾರ್ವಜನಿಕ ಅಭಿಯೋಜಕ ಮನೋಜ್ ಶುಕ್ಲಾ ನ್ಯಾಯಾಲಯದ ಮುಂದೆ ವಿನಂತಿಸಿದ್ದರು.