ಬಂಟ್ವಾಳ: ರೋಹಿಂಗ್ಯ ಮುಸ್ಲಿಮರ ಹತ್ಯೆ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ
ಬಂಟ್ವಾಳ, ಸೆ. 15: ಮಯನ್ಮಾರ್ ರೋಹಿಂಗ್ಯ ಮುಸ್ಲಿಮರ ಮೇಲಿನ ಜನಾಂಗಿಯ ಹತ್ಯೆಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ವತಿಯಿಂದ ತಾಲೂಕಿನ ಬಿ.ಸಿ.ರೋಡ್ ಜಂಕ್ಷನ್ ಬಳಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾತನಾಡಿ, "ಕಳೆದ 2011ರಿಂದ ನಿರಂತರವಾಗಿ ಮಯನ್ಮಾರ್ ರೋಹಿಂಗ್ಯ ಮುಸ್ಲಿಮರ ಮೇಲೆ ಜನಾಂಗಿಯ ಹತ್ಯೆಗಳು ನಡೆಯುತ್ತಿವೆ. ಆದರೆ ಇದರ ಬಗ್ಗೆ ಇತರ ಮುಸ್ಲಿಂ ರಾಷ್ಟ್ರಗಳು ಧ್ವನಿ ಎತ್ತದಿರುವುದು ವಿಷಾದನೀಯ. ರೋಹಿಂಗ್ಯ ಮುಸ್ಲಿಮರ ಮಾರಣ ಹೋಮವನ್ನು ಎಸ್‌ಡಿಪಿಐ ಖಂಡಿಸುತ್ತದೆ ಎಂದು ಹೇಳಿದರು.
ಮಯನ್ಮಾರ್ ಸರಕಾರದ ಆದೇಶದ ಮೇರೆಗೆ ಆ ದೇಶದ ಸೈನ್ಯ ಮತ್ತು ಅರಕಾನ್ ಬೌದ್ಧ ಉಗ್ರವಾದಿಗಳು ರೋಹಿಂಗ್ಯ ಮುಸ್ಲಿಮರನ್ನು ಸರ್ವನಾಶ ಮಾಡುತ್ತಿದ್ದಾರೆ. ಅಲ್ಲದೆ ಅಲ್ಲಿನ ಮುಸ್ಲಿಂ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗುತ್ತಿದೆ ಎಂದ ಅವರು, ಮಯನ್ಮಾರ್ ಸರಕಾರ ಅಲ್ಲಿನ ಮುಸ್ಲಿಮರಿಗೆ ದೇಶದ ನಾಗರಿಕರು ಎಂದು ಪರಿಗಣಿಸಿದೇ ಅವರ ಮಾನವ ಹಕ್ಕುಗಳನ್ನು ನಿರಾಕರಿಸುತ್ತಿರುವುದು ಈ ಘಟನೆಗೆ ಮೂಲ ಕಾರಣ ಎಂದು ಹೇಳಿದರು.
ಎಸ್‌ಡಿಪಿಐ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಶಾಹುಲ್ ಎಸ್.ಎಚ್. ಮಾತನಾಡಿ, "ಭಾರತಕ್ಕೆ ನಿರಾಶ್ರಿತರಾಗಿ ವಲಸೆ ಬಂದಿರುವ ರೋಹಿಂಗ್ಯ ಮುಸ್ಲಿಮರನ್ನು ವಾಪಸ್ ಕಳುಹಿಸಬೇಕೆಂಬ ಕೇಂದ್ರ ಸರಕಾರದ ನಿರ್ಧಾರವು ಮಾನವ ವಿರೋಧಿಯಾಗಿದೆ. ಮುಸ್ಲಿಮರ ನರ ಹತ್ಯೆ ರೋಹಿಂಗ್ಯದಲ್ಲಿ ಮಾತ್ರವಲ್ಲ, ಇತರ ರಾಷ್ಟ್ರಗಳಲ್ಲಿಯೂ ವ್ಯಾಪಕವಾಗಿ ನಡೆಯುತ್ತಿವೆ ಎಂದು ಹೇಳಿದರು.
ಎಸ್‌ಡಿಪಿಐ ಸದಸ್ಯ ಇಮ್ತಿಯಾರ್ ತುಂಬೆ ಮಾತನಾಡಿ, ಮಯನ್ಮಾರ್ ಸರಕಾರವು ರೋಹಿಂಗ್ಯ ಮುಸ್ಲಿಮರನ್ನು ದೇಶದ ನಾಗರಿಕರು ಎಂದು ಪರಿಗಣಿಸಬೇಕು. ಜನಾಂಗಿಯ ಹತ್ಯೆಯ ವಿರುದ್ಧ ವಿಶ್ವ ಸಂಸ್ಥೆಯು ತನ್ನ ಮಿಲಿಟರಿ ಶಕ್ತಿಯನ್ನು ಬಳಸಬೇಕು ಹಾಗೂ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಜಿಪ ಗ್ರಾಪಂ ಅಧ್ಯಕ್ಷ ನಾಸಿರ್ ಸಜಿಪ, ಎಸ್‌ಡಿಪಿಐ ಮುಖಂಡರಾದ ಇಸ್ಮಾಯಿಲ್ ಬಾವ, ಯೂಸುಫ್ ಆಲಡ್ಕ ಮತ್ತಿತರರು ಇದ್ದರು. ಪ್ರತಿಭಟನೆ ನಂತರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.