ಅಸೈಗೋಳಿಯಲ್ಲಿ ಶಾಂತಿ ಸೇವಾ ಆಶ್ರಮ ಉದ್ಘಾಟನೆ

Update: 2017-09-15 14:43 GMT

ಕೊಣಾಜೆ, ಸೆ. 15: ನಿರ್ಗತಿಕರಿಗೆ, ನೋವಿನ ಬದುಕು ಅನುಭವಿಸುವವರಿಗೆ ಆಶ್ರಯ ಕಲ್ಪಿಸಿಕೊಡುವುದು ಮನುಕುಲದ ಬಲು ಶ್ರೇಷ್ಠ ಕಾರ್ಯ ಎಂದು ಕನ್ಯಾನ ಬಾಳೆಕೋಡಿ ಮಠದ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ನುಡಿದರು.

ಅವರು ಶುಕ್ರವಾರ ಅಸೈಗೋಳಿಯಲ್ಲಿ ಉದ್ಘಾಟನೆಗೊಂಡ ಶಾಂತಿ ಸೇವಾ ಆಶ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಮನುಷ್ಯನಾದವನಿಗೆ ಕೆಲವು ವಿಷಯಗಳಲ್ಲಿ ಅಸಮಾನತೆ ಇದ್ದರೂ ಕಾಯಿಲೆ ಹಾಗೂ ಸಾವಿನಲ್ಲಿ ಬೇಧವಿಲ್ಲ. ಅಲ್ಲಿ ಜಾತಿ, ಮತ, ಪಂಗಡ, ಅಚರಣೆ, ಪದ್ಧತಿ, ಕುಟುಂಬ ಯಾವುದೂ ನಗಣ್ಯ. ಬಡವ ಶ್ರೀಮಂತ ಎಂಬ ಬೇಧವಿಲ್ಲ. ನೋವು ಅನುಭವಿಸುವುದರಲ್ಲಿಯೂ ತಾರತಮ್ಯ ಇಲ್ಲ. ಹಾಗಾಗಿ ಕಾಯಿಲೆ ಹಾಗೂ ಸಾವಿನಿಂದ ಪಾರಾಗಲು ಪ್ರಾರ್ಥನೆಯೇ ಮುಖ್ಯವಾಗಿದೆ ಎಂದರು.

ಕಷ್ಟ ಸುಖಗಳನ್ನು ಅನುಭವಿಸುವಾಗ ಯಾವುದೇ ಸ್ವರದಲ್ಲಿ ಯಾವ ಶಬ್ಧದಲ್ಲಿ ಯಾವ ದೇವರನ್ನು ಕರೆದರೂ ನಮ್ಮ ಧ್ವನಿ ಆಲಿಸುವ ದೇವನೊಬ್ಬನೆ. ಮನಸ್ಸು ಎಲ್ಲಕ್ಕಿಂತ ದೊಡ್ಡದು. ಆಶ್ರಮ ತತ್ವದಡಿಯಲ್ಲಿ ಆಶ್ರಯ ಪಡೆದವರಿಗೆ ಹತ್ತು ಜನ ಸೇರಿಕೊಂಡು ಸಹಾಯ ಮಾಡುವುದರಿಂದ ನೊಂದ ಮನಸ್ಸಿನಿಂದ ಆಶ್ರಯ ಪಡೆದವರಲ್ಲಿ ನವಚೈತನ್ಯ ತುಂಬಲು ಸಾಧ್ಯವಾಗುತ್ತದೆ. ಯಾವ ವ್ಯಕ್ತಿ ಇತರರ ನೋವಿನಲ್ಲಿ ಸ್ಪಂದಿಸುತ್ತಾನೋ ಆ ವ್ಯಕ್ತಿ ಬದುಕಿನಲ್ಲಿ ಸೋಲುವುದಿಲ್ಲ. ದೇವರ ಸಂಪ್ರೀತಿ ಗಳಿಸುತ್ತಾನೆ. ಶಾಂತಿ ಸೇವಾ ಆಶ್ರಮದಲ್ಲಿಯೂ ನೊಂದವರ ಕಣ್ಣೀರು ಒರೆಸುವ ಕಾಯರ್ ಸದಾ ನಡೆಯಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಜ್ಯೋತಿಷಿ ಪ್ರಸಾದ್ ವಿಟ್ಲ ಮಾತನಾಡಿ ಆಶ್ರಮವೆಂದರೆ ಶಾಂತಿಧಾಮ. ಬದುಕಿನಲ್ಲಿ ಹತಾಶರಾದವರಿಗೆ ಆಶ್ರಯ ಕೊಟ್ಟಾಗ ಅವರ ಹಾರೈಕೆ ನಮ್ಮ ಯಶಸ್ಸಿಗೆ ದಾರಿದೀಪವಾಗುತ್ತದೆ. ಆಶ್ರಮದಲ್ಲಿ ಮತ ಧರ್ಮ ಜಾತಿ ಬೇಧವಿಲ್ಲ. ಇರುವುದು ಮುಷ್ಯ ಧರ್ಮ ಮಾತ್ರ ಎಂದರು.  ಪ್ರಗತಿಪರ ಕೃಷಿಕ ಮರ್ಸಲ್ ಡಿಸೋಜ ನೂತನ ಆಶ್ರಮವನ್ನು ಉದ್ಘಾಟಿಸಿದರು.

ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಮೆಲ್ಕಾರ್ ಬಿರುವ ಸೆಂಟರ್‌ನ ಮಾಲೀಕ ಸಂಜೀವ ಪೂಜಾರಿ, ಕೊಣಾಜೆಯ ಲಯನ್ಸ್ ಕ್ಲಬ್ ಮಂಗಳಗಂಗೋತ್ರಿಯ ಮಾಜಿ ಅಧ್ಯಕ್ಷ ರಘುರಾಮ ಕಾಜವ,  ಉದ್ಯಮಿ ವಿಜೇಶ್ ಕೊಳಕೆ, ಕರ್ನಾಟಕ ಮಹಿಳಾ ಮತ್ತು ಮಕ್ಕಳ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷೆ ಹಸೀನಾ, ಉಳ್ಳಾಲ ಮದನಿ ಪ್ರೌಢಶಾಲೆಯ ನಿವೃತ್ತ ಅಧ್ಯಾಪಕ ಎಲಿಯಾಸ್ ಡಿಸೋಜ, ಮಾಜಿ ಮಂಡಲ ಪಂಚಾಯಿತಿ ಸದಸ್ಯ ಟಿ.ಎಸ್. ಅಬ್ದುಲ್ಲ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ‘ಡಿ’ ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಪ್ರಾಂಕಿ "ಡಿ" ಕುಟ್ಟಿನ್ಹ ಉಪಸ್ಥಿತರಿದ್ದರು.

ಶಾಂತಿ ಸೇವಾ ಆಶ್ರಮ ಸ್ಥಾಪಕ  ಅರುಣ್ ಡಿಸೋಜ ಅಸೈಗೋಳಿ ವಂದಿಸಿದರು. ಉಳ್ಳಾಲ ಅಳೇಕಲ ಮದನಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಆನಂದ್ ಅಸೈಗೋಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News