‘ನನ್ನನ್ನು ಪ್ರಶ್ನಿಸಿ,ನನ್ನ ಮಗನಿಗೆ ಕಿರುಕುಳ ನೀಡಬೇಡಿ’: ಸಿಬಿಐ ಅಧಿಕಾರಿಗಳಿಗೆ ಚಿದಂಬರಂ
ಹೊಸದಿಲ್ಲಿ,ಸೆ.15: ಸಿಬಿಐ ಏರ್‌ಸೆಲ್-ಮ್ಯಾಕ್ಸಿಸ್ ಪ್ರಕರಣದಲ್ಲಿ ತನ್ನ ಮಗನಿಗೆ ಕಿರುಕುಳ ನೀಡಬಾರದು ಮತ್ತು ಅದು ತನ್ನನ್ನು ಪ್ರಶ್ನಿಸಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು ಶುಕ್ರವಾರ ಬೆಳಿಗ್ಗೆ ತನ್ನ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.
ಕಾರ್ತಿ ಚಿದಂಬರಂ ಗುರುವಾರ ಪ್ರಕರಣದಲ್ಲಿ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಲು ನಿರಾಕರಿಸಿದ್ದರು. ಚಿದಂಬರಂ ಅವರು 2006ರಲ್ಲಿ ವಿತ್ತಸಚಿವರಾಗಿದ್ದಾಗ ಏರ್‌ಸೆಲ್-ಮ್ಯಾಕ್ಸಿಸ್ ವ್ಯವಹಾರಕ್ಕೆ ವಿದೇಶಿ ಹೂಡಿಕೆಗೆ ಅನುಮತಿ ನೀಡಿದ್ದಕ್ಕೆ ಈ ಪ್ರಕರಣವು ಸಂಬಂಧಿಸಿದೆ. ವಿಶೇಷ ನ್ಯಾಯಾಲಯವೊಂದು ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಿದೆ ಮತ್ತು ವಿಚಾರಣಾ ಕಲಾಪಗಳನ್ನು ಅಂತ್ಯಗೊಳಿಸಿದೆ ಎಂದು ಚಿದಂಬರಂ ಹೇಳಿದ್ದರೆ, ತನಿಖೆ ಇನ್ನೂ ನಡೆಯುತ್ತಿದೆ ಎಂದು ಸಿಬಿಐ ಪ್ರತಿಪಾದಿಸುತ್ತಿದೆ.
ಸಿಬಿಐ ತಪ್ಪು ಮಾಹಿತಿಗಳನ್ನು ಹರಡುತ್ತಿದೆ ಎಂದೂ ಚಿದಂಬರಂ ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ಅದರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.