ಎಂಡೋ ಸಂತ್ರಸ್ತರ ಶಾಶ್ವತ ಪುನರ್ವಸತಿ ಪ್ಯಾಕೇಜ್, ಮಾಸಾಶನ ಹೆಚ್ಚಳಕ್ಕೆ ಆಗ್ರಹ

Update: 2017-09-15 14:53 GMT

ಉಪ್ಪಿನಂಗಡಿ, ಸೆ. 15: ಎಂಡೋ ಸಂತ್ರಸ್ಥರಿಗೆ ಶಾಶ್ವತ ಪುನರ್ವಸತಿ ಯೋಜನೆ ಪ್ಯಾಕೇಜ್, ಎಂಡೋ ಸಂತ್ರಸ್ತರಿಗೆ ನೀಡುತ್ತಿರುವ ಮಾಸಾಶನವನ್ನು ಹೆಚ್ಚಳ ಮಾಡಬೇಕು ಮೊದಲಾದ 9 ಪ್ರಮುಖ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ದ.ಕ. ಜಿಲ್ಲಾ ಎಂಡೋ ವಿರೋಧಿ ಹೋರಾಟ ಸಮಿತಿ ವತಿಯಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೆ. 13ರಂದು ಬೆಂಗಳೂರು ವಿಧಾನ ಸೌಧದಲ್ಲಿ ಅವರ ಕಚೇರಿಯಲ್ಲಿ ನೀಡಲಾಯಿತು.

ಎಂಡೋ ಪೀಡಿತರಿಗೆ ಈಗಾಗಲೇ ಸರ್ಕಾರ ಪರಿಹಾರ ಘೋಷಣೆ ಮಾಡಿದೆ, ಆದರೆ ಹಾಸಿಗೆ ಹಿಡಿದಿರುವ ಎಂಡೋ ಪೀಡಿತರು ಇನ್ನೂ ನಕರ ಯಾತನೆ ಪಡುವಂತಾಗಿದೆ. ತನ್ನ ದೈನಂದಿನ ಪ್ರತಿಯೊಂದು ಕೆಲಸಗಳಿಗೂ ಹೆತ್ತವರನ್ನೇ ಅವಲಂಭಿಸುವಂತಾಗಿದೆ. ಇವರ ಜೀವನ ನರಕ ಸದೃಶವಾಗಿದ್ದು, ಹೆತ್ತವರು ಸಂತ್ರಸ್ತರ ನರಳಾಟ, ಚೀರಾಟ, ನೋವು, ವೇದನೆ ನೋಡಿ ಅವರೂ ಖಿನ್ನತೆಗೆ ಒಳಗಾಗಿದ್ದಾರೆ. ಈಗಾಗಲೇ ಬೆಳ್ತಂಗಡಿ ತಾಲ್ಲೂಕಿನ ಆಲಡ್ಕ ಎಂಬಲ್ಲಿ ಎಂಡೋ ಸಂತ್ರಸ್ತ ಬಾಬು ಗೌಡ ಕುಟುಂಬದ 4 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದು ಜೀವಂತ ಸಾಕ್ಷಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹೆತ್ತವರ ಅಗಲಿಕೆಯ ನಂತರ ಸಂತ್ರಸ್ತರ ಗತಿ ಏನು? ಎನ್ನುವಂತಾಗಿದೆ. ಆದ ಕಾರಣ ಅತೀ ಜರೂರಾಗಿ ಜಿಲ್ಲೆಗೊಂದು ಶಾಶ್ವತ ಪುನರ್ವಸತಿ ಕೇಂದ್ರ ತೆರೆಯಬೇಕು, ಅದರಲ್ಲೂ ಪುತ್ತೂರು ತಾಲ್ಲೂಕಿನ ಆಲಂಕಾರು ಎಂಬಲ್ಲಿ ಹೋರಾಟದ ಫಲವಾಗಿ 5 ಎಕ್ರೆ ಜಾಗ ಸರ್ಕಾರದ ವತಿಯಿಂದ ಕಾಯ್ದಿರಿಸಲಾಗಿದೆ. ಇದರಲ್ಲಿ ಶೀಘ್ರವಾಗಿ ಪುನರ್ವಸತಿ ಕೇಂದ್ರ ಸ್ಥಾಪನೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.

ಮಾಸಾಶನ ಹೆಚ್ಚಳಕ್ಕೆ ಆಗ್ರಹ

ಎಂಡೋ ಪೀಡಿತರಿಗೆ ಈಗಿರುವ ಮಾಸಾಶನ 3 ಸಾವಿರ ರೂ. ಮತ್ತು 1500 ಇರುವುದನ್ನು ಬದಲಾಗಿ 6 ಸಾವಿರ ಮತ್ತು 4 ಸಾವಿರಕ್ಕೆ ಹೆಚ್ಚಳ ಮಾಡಬೇಕು, ಹಾಸಿಗೆ ಹಿಡಿದಿರುವ ಎಂಡೋ ಸಂತ್ರಸ್ತರ ಹೆತ್ತವರಿಗೆ 3 ಸಾವಿರ  ರೂ. ಮಾಶಾಸನ ಕೊಡಬೇಕು, ಹಾಸಿಗೆ ಹಿಡಿದಿರುವ ಎಂಡೋ ಸಂತ್ರಸ್ತರ ಮನೆಗೆ ವಾರಕ್ಕೊಮ್ಮೆ ನುರಿತ ವೈದ್ಯರು ಭೇಟಿ ನೀಡಬೇಕು, ಎಂಡೋ ಪಾಲನಾ ಕೇಂದ್ರಗಳು ಮತ್ತು ಪುನರ್ವಸತಿ ಕೇಂದ್ರಗಳ ನಿರ್ವಹಣೆ ಜವಾಬ್ದಾರಿಯನ್ನು ಎಂಡೋ ಸಂತ್ರಸ್ಥ ಕುಟುಂಬದ ಸದಸ್ಯರಿಂದಲೇ ಸ್ಥಾಪಿಸಲ್ಪಟ್ಟಿರುವ ದ.ಕ. ಜಿಲ್ಲಾ ಎಂಡೋ ಸಂತ್ರಸ್ತರ ಸಹಕಾರಿ ಸಂಘಕ್ಕೆ ನೀಡಬೇಕು. ಈ ತನಕ ಕೇಂದ್ರ ಸರ್ಕಾರದಿಂದ ಯಾವುದೇ ಪರಿಹಾರ ಸಂತ್ರಸ್ತರಿಗೆ ಸಿಕ್ಕಿರುವುದಿಲ್ಲ. ಕೇಂದ್ರ ಸರ್ಕಾರದ ವತಿಯಿಂದಲೂ ಪರಿಹಾರಕ್ಕಾಗಿ ರಾಜ್ಯ ಸರ್ಕಾರದಿಂದ ಪ್ರಸ್ತಾವಣೆ ಸಲ್ಲಿಸಬೇಕು ಮೊದಲಾದ ಬೇಡಿಕೆಗಳನ್ನು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮುಖ್ಯಮಂತ್ರಿಯವರನ್ನು ಭೇಟಿ ಮಾಡಲಾದ ನಿಯೋಗದಲ್ಲಿ ದ.ಕ. ಜಿಲ್ಲಾ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಪೀರ್ ಮಹಮ್ಮದ್ ಸಾಹೇಬ್, ಕಾರ್ಯದರ್ಶಿ ಜಯಕರ ಪೂಜಾರಿ, ಸದಸ್ಯ, ಪತ್ರಕರ್ತ ಸಿದ್ದಿಕ್ ನೀರಾಜೆ, ಎಂಡೋ ಸಂತ್ರಸ್ಥರ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ಗಂಗಾರತ್ನ ವಸಂತ, ನಿರ್ದೇಶಕ ಎಸ್.ಕೆ. ಪುತ್ತುಮೋನು, ಸಾಮಾಜಿಕ ಕಾರ್ಯಕರ್ತ ಎಸ್.ಕೆ. ದಯಾನಂದ, ಎಂಡೋ ಸಂತ್ರಸ್ತರಾದ ಶ್ರೀಮತಿ ರಾಜೀವಿ ಪೂಜಾರಿ, ಶ್ರೀಮತಿ ಮರಿಯಮ್ಮ, ಶ್ರೀಮತಿ ಆಶಿಯಮ್ಮ ಮತ್ತಿತರರು ಉಪಸ್ಥಿತರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News