ದೇರಳಕಟ್ಟೆ: ರೋಹಿಂಗ್ಯಾ ಮುಸ್ಲಿಮರ ಹತ್ಯೆ ಖಂಡಿಸಿ ಎಸ್ ಡಿ ಪಿ ಐ ಪ್ರತಿಭಟನೆ

Update: 2017-09-15 15:31 GMT

ಉಳ್ಳಾಲ, ಸೆ. 15:  ಮಯನ್ಮಾರ್ ನಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು ಗುರಿಯಾಗಿಸಿ ನಡೆಯುತ್ತಿರುವ ಮಾರಣ ಹೋಮದ ಬಗ್ಗೆ ಎಸ್.ಡಿ.ಪಿ.ಐ ಖಂಡಿಸುತ್ತದೆ. ಮಯನ್ಮಾರ್ ನಲ್ಲಿ ಬೌದ್ಧ ಉಗ್ರವಾದಿಗಳು ರೋಹಿಂಗ್ಯಾ ಮುಸ್ಲಿಮರ ಮೇಲೆ ನಡೆಸುತ್ತಿರುವ ಕ್ರೌರ್ಯ ಕಳವಳಕಾರಿಯಾದುದ್ದು ಮತ್ತು ಹೃದಯ ವಿದ್ರಾವಕವಾದುದು. ಮಯನ್ಮಾರ್ ಸರಕಾರದ ಆದೇಶದ ಮೇರೆಗೆ ಆ ದೇಶದ ಸೈನ್ಯ ಮತ್ತು ಅರಕಾನ್ ಬೌದ್ಧರು ರೋಹಿಂಗ್ಯಾ ಮುಸ್ಲಿಮರನ್ನು ಸರ್ವನಾಶ ಮಾಡುತ್ತಿದ್ದು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಎಸ್‌ಡಿಪಿಐ ರಾಜ್ಯ ಸದಸ್ಯ ಅಸ್ಲಂ ಹಸನ್ ಹೇಳಿದರು.

ಅವರು ರೋಹಿಂಗ್ಯಾ ಜನಾಂಗೀಯ ಹತ್ಯೆಯ ವಿರುದ್ದ ವಿಶ್ವಸಂಸ್ಥೆ ತನ್ನ ಮಿಲಿಟರಿ ಶಕ್ತಿಯನ್ನು ಬಳಸಬೇಕು, ಮಯನ್ಮಾರ್ ಸರಕಾರವು ರೋಹಿಂಗ್ಯಾ ಜನಾಂಗವನ್ನು ತನ್ನ ದೇಶದ ನಾಗರೀಕರೆಂದು ಪರಿಗಣಿಸಬೇಕು ಮತ್ತು ರೋಹಿಂಗ್ಯಾ ನಿರಾಶ್ರಿತರಿಗೆ ಪುನರ್ವಸತಿ ಹಾಗೂ ಪರಿಹಾರವನ್ನು ಘೋಷಿಸಿ ಸೂಕ್ತ ರಕ್ಷಣೆಯನ್ನು ನೀಡಬೇಕೆಂದು ಆಗ್ರಹಿಸಿ ದೇಶದಾದ್ಯಂತ ನಡೆಸುವ "ರೋಹಿಂಗ್ಯಾ ಹತ್ಯಾಕಾಂಡವನ್ನು ನಿಲ್ಲಿಸಿ" ಎಂಬ ಘೋಷಣೆಯೊಂದಿಗೆ ಎಸ್‌ಡಿಪಿಐ ಮಂಗಳೂರು ವಿಧಾನ ಸಭಾ ಕ್ಷೇತ್ರ ವತಿಯಿಂದ ದೇರಳಕಟ್ಟೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

 ಪಿಎಫ್‌ಐ ದ.ಕ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ್, ಉಳ್ಳಾಲ ವಲಯಾಧ್ಯಕ್ಷ ಸಿದ್ದೀಕ್ ಯು.ಬಿ, ಎಸ್‌ಡಿಪಿಐ ಮಂಗಳೂರು ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಅಬ್ಬಾಸ್ ಕಿನ್ಯಾ, ಕಾರ್ಯದರ್ಶಿ ಹಾರಿಸ್ ಮಲಾರ್, ಸದಸ್ಯರಾದ ನೌಷಾದ್ ಕಲ್ಕಟ್ಟ, ಇರ್ಶಾದ್ ಕೆ.ಸಿರೋಡು, ಝಾಹಿದ್ ಮಲಾರ್, ಬಶೀರ್ ಅಜಿನಡ್ಕ, ರವೂಫ್ ಉಳ್ಳಾಲ್ ಮುಂತದವರು ಈ ಸಂದರ್ಭ ಉಪಸ್ಥಿತರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News