×
Ad

ರೈಲು ಊಟದ ಗುಣಮಟ್ಟ: ಅನಿಸಿಕೆ ವ್ಯಕ್ತಪಡಿಸಲು ಟ್ಯಾಬ್ಲೆಟ್ ವ್ಯವಸ್ಥೆ ಜಾರಿಗೆ

Update: 2017-09-15 21:04 IST

ಹೊಸದಿಲ್ಲಿ, ಸೆ.15: ಇನ್ನು ಮುಂದೆ ರೈಲಿನಲ್ಲಿ ಸರಬರಾಜು ಮಾಡಲಾಗುವ ಊಟದ  ಬಗ್ಗೆ ರೈಲು ಪ್ರಯಾಣಿಕರು ತಮ್ಮ ಅನಿಸಿಕೆಯನ್ನು ‘ಟ್ಯಾಬ್ಲೆಟ್’ನಲ್ಲಿ ವ್ಯಕ್ತಪಡಿಸುವ ಅವಕಾಶ ಲಭ್ಯವಾಗಲಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

 ಪ್ರಮುಖ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಒದಗಿಸಲಾಗುವ ಟ್ಯಾಬ್ಲೆಟ್‌ನಲ್ಲಿ ಆನ್‌ಲೈನ್ ಅರ್ಜಿಯೊಂದನ್ನು ನೀಡಲಾಗುತ್ತಿದ್ದು ಅದರಲ್ಲಿ ಪ್ರಯಾಣಿಕರು ರೈಲಿನಲ್ಲಿ ತಮಗೆ ಸರಬರಾಜು ಮಾಡಿರುವ ಆಹಾರವು ‘ಉತ್ತಮ, ಸಾಧಾರಣ ಅಥವಾ ಕಳಪೆ’ ಯಾಗಿದೆ ಎಂದು ಪ್ರತಿಕ್ರಿಯಿಸಲು ಅವಕಾಶವಿದೆ.

ವಿವಿಧ ರೈಲ್ವೇ ವಲಯಗಳಲ್ಲಿರುವ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಶನ್‌ನ ಮೇಲ್ವಿಚಾರಕರಿಗೆ ಸುಮಾರು 100 ಟ್ಯಾಬ್ಲೆಟ್‌ಗಳನ್ನು ಒದಗಿಸಲಾಗಿದೆ. ಇದರಲ್ಲಿ ಆಹಾರದ ಗುಣಮಟ್ಟ, ಸಿಬ್ಬಂದಿಗಳ ವರ್ತನೆ ಮತ್ತಿತರ ವಿವರಗಳನ್ನು ಪ್ರಯಾಣಿಕರು ದಾಖಲಿಸಬಹುದಾಗಿದೆ.

ಗುರುವಾರ ಪ್ರಪ್ರಥಮ ಬಾರಿಗೆ ಅಹ್ಮದಾಬಾದ್- ದಿಲ್ಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯೋಗಾರ್ಥವಾಗಿ ಈ ಟ್ಯಾಬ್ಲೆಟ್ ಬಳಸಲಾಗಿದೆ. ಶೀಘ್ರವೇ ಇದನ್ನು ಅಧಿಕೃತವಾಗಿ ಜಾರಿಗೊಳಿಸಲಾಗವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ಯಾಬ್ಲೆಟ್‌ನಲ್ಲಿ ಪ್ರಯಾಣಿಕರ ಹೆಸರು, ದೂರವಾಣಿ ಸಂಖ್ಯೆ ಮತ್ತಿತರ ವಿವರಗಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಅಲ್ಲದೆ ಪ್ರಯಾಣಿಕರಿಗೆ ತಮ್ಮ ಅನಿಸಿಕೆ ವ್ಯಕ್ತಪಡಿಸುವ ಅವಕಾಶವಿದೆ.

ಪ್ರಸ್ತುತ ಆಹಾರದ ಬಗ್ಗೆ ದೂರುಗಳಿದ್ದರೆ 139 ನಂಬರ್‌ಗೆ ಡಯಲ್ ಮಾಡಿ ದೂರು ದಾಖಲಿಸಲು ಅವಕಾಶವಿದೆ. ಅಲ್ಲದೆ ರೈಲಿನಲ್ಲಿರುವ ದೂರುಪುಸ್ತಕದಲ್ಲಿ ಪ್ರಯಾಣಿಕರಿಗೆ ದೂರು ದಾಖಲಿಸುವ ಅವಕಾಶ ಇತ್ತು. ಟ್ಯಾಬ್ಲೆಟ್ ವ್ಯವಸ್ಥೆಯ ಜೊತೆ ಈ ಎರಡು ಆಯ್ಕೆಗಳೂ ಪ್ರಯಾಣಿಕರಿಗೆ ಲಭ್ಯವಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News