ಸಿಬ್ಬಂದಿ ವೇತನ ಪಾವತಿಗಾಗಿ ಹಡಗು ಮಾರಾಟಕ್ಕೆ ಕೋರ್ಟ್ ಅಸ್ತು

Update: 2017-09-15 16:52 GMT

ಲಂಡನ್, ಸೆ. 15: ಸ್ಕಾಟ್‌ಲ್ಯಾಂಡ್‌ನಲ್ಲಿ ಕಳೆದ ವರ್ಷ ಹಿಡಿದಿಡಲಾಗಿದ್ದ ಭಾರತೀಯ ಹಡಗಿನ 11 ಭಾರತೀಯ ಸಿಬ್ಬಂದಿಗೆ ವೇತನ ಕೊಡುವುದಕ್ಕಾಗಿ ಹಡಗನ್ನು ಮಾರಾಟ ಮಾಡಲು ಬ್ರಿಟನ್‌ನ ನ್ಯಾಯಾಲಯವೊಂದು ಶುಕ್ರವಾರ ಬ್ರಿಟಿಶ್ ಅಧಿಕಾರಿಗಳಿಗೆ ಅನುಮತಿ ನೀಡಿದೆ.

‘ಮಾಲವೀಯ ಸೆವೆನ್’ ಹಡಗಿನಲ್ಲಿ ಈಗಲೂ ಇರುವ ಸಿಬ್ಬಂದಿಗೆ 6 ಲಕ್ಷ ಪೌಂಡ್ (ಸುಮಾರು 5.22 ಕೋಟಿ ರೂಪಾಯಿ) ಗಿಂತಲೂ ಅಧಿಕ ವೇತನ ಬಾಕಿಯಿದೆ ಎಂದು ಅಂತಾರಾಷ್ಟ್ರೀಯ ಸಾರಿಗೆ ಕೆಲಸಗಾರರ ಒಕ್ಕೂಟ (ಐಟಿಎಫ್) ಹೇಳಿದೆ.

ಹರಾಜು ಮೂಲಕ ಹಡಗನ್ನು ಮಾರಾಟ ಮಾಡಿದರೆ 11 ಸಿಬ್ಬಂದಿಯ ಪಾವತಿಯಾಗದ ವೇತನ ವಸೂಲಾಗುತ್ತದೆ ಎಂಬ ನಿರೀಕ್ಷೆಯನ್ನು ಅದು ಹೊಂದಿದೆ.

 ಹಡಗಿನ ಮಾಲೀಕ ಸಂಸ್ಥೆ ಮುಂಬೈಯ ಜಿಒಎಲ್ ಆಫ್‌ಶೋರ್ ಲಿಮಿಟೆಡ್ ಈಗ ‘ಲಿಕ್ಷಿಡೇಶನ್’ (ಕಂಪೆನಿಯ ಆಸ್ತಿಗಳನ್ನು ಹಣದ ರೂಪಕ್ಕೆ ಪರಿವರ್ತಿಸುವುದು) ಪ್ರಕ್ರಿಯೆಯಲ್ಲಿದೆ.

ಹಡಗು ಸ್ಕಾಟ್‌ಲ್ಯಾಂಡ್‌ನ ಆ್ಯಬರ್ಡಿನ್ ಬಂದರಿನಿಂದ ಹೊರ ಹೋಗದಂತೆ ತಡೆಯುವ ಆದೇಶವೊಂದನ್ನು ಈ ಮೊದಲೇ ಹೊರಡಿಸಲಾಗಿತ್ತು.

ಸಿಬ್ಬಂದಿಗೆ ವೇತನ ಪಾವತಿಸದ ವಿಚಾರದಲ್ಲಿ ಈ ಹಡಗನ್ನು ಎರಡು ಬಾರಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಮೊದಲನೆಯದಾಗಿ, 2016 ಜೂನ್‌ನಲ್ಲಿ ಅದನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಸಂಬಳ ಪಾವತಿಯಾದ ಬಳಿಕ ಹಡಗನ್ನು ಬಿಡುಗಡೆಮಾಡಲಾಗಿತ್ತು. ಆದರೆ, ಎರಡು ತಿಂಗಳ ಬಳಿಕ ಅದೇ ಆರೋಪದಲ್ಲಿ ಆ್ಯಬರ್ಡಿನ್ ಬಂದರಿನಲ್ಲಿ ಅದು ಹಿಡಿದಿಡಲಾಯಿತು.

ಹಡಗು ಬಿಟ್ಟು ಹೋದರೆ ತಮ್ಮ ವೇತನ ಪಾವತಿಯಾಗದು ಎಂಬ ಹೆದರಿಕೆಯಿಂದ ಅದರ ಸಿಬ್ಬಂದಿ ಹಡಗಿನಲ್ಲೇ ಉಳಿದಿದ್ದಾರೆ.

ಹಡಗಿನ ಮಾರಾಟದಿಂದ 8.5 ಲಕ್ಷ ಪೌಂಡ್ (ಸುಮಾರು 7.40 ಕೋಟಿ ರೂಪಾಯಿ) ಬರಬಹುದು ಎಂಬುದಾಗಿ ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News