ಶಿರಿಯಾರ ಗ್ರಾಪಂ ಉಪಚುನಾವಣೆ: 13 ಸ್ಥಾನಗಳಿಗೆ 30 ಮಂದಿ ಸ್ಪರ್ಧೆ
Update: 2017-09-15 22:24 IST
ಉಡುಪಿ, ಸೆ.15: ತಾಲೂಕಿನ ಶಿರಿಯಾರ ಗ್ರಾಪಂನ 13 ಸ್ಥಾನಗಳಿಗೆ ಸೆ. 24ರಂದು ನಡೆಯುವ ಉಪ ಚುನಾವಣೆಯಲ್ಲಿ ಒಟ್ಟು 30 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ಒಟ್ಟು 31 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇಂದು ನಾಮಪತ್ರಗಳ ಪರಿಶೀಲನೆಯ ವೇಳೆ ಒಂದು ನಾಮಪತ್ರವನ್ನು ತಿರಸ್ಕರಿಸಲಾಗಿದ್ದು 30 ಮಂದಿ ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ.
ಶಿರಿಯಾರ-1 ವಾರ್ಡಿನ ಮೂರು ಸ್ಥಾನಗಳಿಗೆ 8ಮಂದಿ, ಶಿರಿಯಾರ-2ರಲ್ಲಿ ಎರಡು ಸ್ಥಾನಗಳಿಗೆ ಐವರು, ಶಿರಿಯಾರ-3ರ ನಾಲ್ಕು ಸ್ಥಾನಗಳಿಗೆ ಐವರು ಹಾಗೂ ಶಿರಿಯಾರ-4ರ ನಾಲ್ಕು ಸ್ಥಾನಗಳಿಗೆ 12 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ನಾಮಪತ್ರಗಳನ್ನು ಹಿಂಪಡೆಯಲು ಸೆ.18 ಕೊನೆಯ ದಿನವಾಗಿದ್ದು, ಸೆ.24 ರಂದು ಚುನಾವಣೆ ನಡೆಯಲಿದೆ. ಸೆ.27ರಂದು ಮತ ಎಣಿಕೆ ತಾಲೂಕು ಕೇಂದ್ರದಲ್ಲಿ ನಡೆಯಲಿದೆ. ಉಪ ಚುನಾವಣೆ ನಡೆಯುವ ಶಿರಿಯಾರ ಗ್ರಾಪಂ ವ್ಯಾಪ್ತಿಯಲ್ಲಿ ಸೆ.27ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ ಎಂದು ಪ್ರಕಟಣೆ ತಿಳಿಸಿದೆ.