ಹೊಸ ಸಂಶೋಧನೆಗಳಿಗೆ ಆದ್ಯತೆ ನೀಡಿ: ಪ್ರಿಯಾಂಕಾ ಮೇರಿ ಫ್ರಾನ್ಸಿಸ್
ಉಡುಪಿ, ಸೆ. 15: ಸಮಾಜದ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೊಸ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ದೇಶದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಬಹುದಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ಮಣಿಪಾಲ ಎಂಐಟಿಯ ವಜ್ರಮಹೋತ್ಸವದ ಪ್ರಯುಕ್ತ ಎಂಐಟಿ ಲೈಬ್ರೆರಿ ಆಡಿಟೋರಿಯಂನಲ್ಲಿ ಶುಕ್ರವಾರ ಆಯೋಜಿಸಲಾದ ಇಂಜಿನಿಯರ್ಸ್ ದಿನಾ ಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಯಾಗಿ ಹೊಸದಿಲ್ಲಿ ಎವರೆಸ್ಟ್ ಗ್ರೂಪ್‌ನ ನಿರ್ದೇಶಕ ಅಮಿತ್ ಕಪೂರ್ ಮಾತನಾಡಿ, ಬದುಕಿನಲ್ಲಿ ಸಮಸ್ಯೆ, ಅವಕಾಶ, ಪರಿಹಾರಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ನಮ್ಮನ್ನು ಉತ್ತಮವಾಗಿ ರೂಪಿಸಿಕೊಳ್ಳಲು ನಮಗೊಬ್ಬ ಮಾರ್ಗದರ್ಶಕಬೇಕು. ಪ್ರೋತ್ಸಾಹ ಮತ್ತು ಮಾರ್ಗದರ್ಶನ ಇಲ್ಲದೇ ಯಾವುದೂ ಸಾಧ್ಯವಾಗುವುದಿಲ್ಲ. ನಾವು ಜೀವನದಲ್ಲಿ ಪ್ರತಿಯೊಬ್ಬರಿಂದಲೂ ಕೆಲವೊಂದು ವಿಷಯಗಳನ್ನು ಅರಿತುಕೊಳ್ಳುತ್ತೇವೆ ಎಂದರು.
ಮಣಿಪಾಲ ವಿವಿಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್, ಕಾರ್ಯ ಕ್ರಮ ಸಂಯೋಜಕ ಡಾ.ಜಗನ್ನಾಥ್ ಕೆ. ಉಪಸ್ಥಿತರಿದ್ದರು. ಎಂಐಟಿ ನಿರ್ದೇಶಕ ಡಾ.ಜಿ.ಕೆ.ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಎಂಐಟಿಯ ಸಹಾಕ ನಿರ್ದೇಕ ಡಾ.ಬಿ.ಎಚ್.ವಿ.ಪೈ ವಂದಿಸಿದರು.