ವಿಟ್ಲಪಿಂಡಿಯಲ್ಲಿ ಬಿದ್ದ ಡ್ರೋಣ್: ಪೊಲೀಸ್ ತನಿಖೆ
ಉಡುಪಿ, ಸೆ.15: ಉಡುಪಿ ಶ್ರೀಕೃಷ್ಣ ಮಠದ ವಿಟ್ಲಪಿಂಡಿಯಲ್ಲಿ ನಿನ್ನೆ ಎರಡು ಡ್ರೋಣ್ ಕ್ಯಾಮೆರಾಗಳು ನಿಯಂತ್ರಣ ತಪ್ಪಿ ಬಿದ್ದು ಒಬ್ಬರು ಗಾಯಗೊಂಡ ಪ್ರಕರಣದ ಕುರಿತು ಉಡುಪಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಒಟ್ಟು ಮೂರು ಮಂದಿ ಫೋಟೋಗ್ರಾಫರ್‌ಗಳಿಗೆ ಡ್ರೋಣ್ ಮೂಲಕ ವಿಟ್ಲಪಿಂಡಿಯ ಚಿತ್ರೀಕರಣ ನಡೆಸಲು ಅನುಮತಿ ನೀಡಿದ್ದು, ಇದರಲ್ಲಿ ಒಂದು ಡ್ರೋಣ್ ನಿಯಂತ್ರಣ ತಪ್ಪಿ ಶೋಭಾಯಾತ್ರೆಯಲ್ಲಿದ್ದ ಭಕ್ತರ ಮೇಲೆ ಬಿತ್ತೆನ್ನಲಾಗಿದೆ. ಇದರ ಪರಿಣಾಮ ದೊಡ್ಡಣಗುಡ್ಡೆಯ ವ್ಯಕ್ತಿಯೊಬ್ಬರ ಕಣ್ಣಿಗೆ, ಕುತ್ತಿಗೆಗೆ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.
ಇನ್ನೊಂದು ಡ್ರೋಣ್ ಕೆಮರಾ ಮಧ್ವ ಸರೋವರದ ಬಳಿ ನಿಯಂತ್ರಣ ತಪ್ಪಿ ಜನರ ಮಧ್ಯೆ ಬಿತ್ತೆನ್ನಲಾಗಿದೆ. ಇದರಿಂದ ಸಾರ್ವಜನಿಕರು ಆತಂಕಗೊಂಡು ಅಲ್ಲಿಂದ ಚದುರಿದರು. ಆದರೆ ಇದರಿಂದ ಯಾರಿಗೂ ಗಾಯಗಳಾಗಿಲ್ಲ. ‘ಪೊಲೀಸ್ ಇಲಾಖೆಯಿಂದ ಮೂರು ಡ್ರೋಣ್‌ಗಳಿಗೆ ಅನುಮತಿ ನೀಡ ಲಾಗಿದೆ. ಒಂದು ಡ್ರೋಣ್ ಬಿದ್ದು ಒಬ್ಬರು ಗಾಯಗೊಂಡ ಬಗ್ಗೆ ತಿಳಿದು ಬಂದಿದೆ. ಆದರೆ ಈ ಬಗ್ಗೆ ಯಾರು ಕೂಡ ದೂರು ಕೊಟ್ಟಿಲ್ಲ. ಆದರೂ ಈ ಕುರಿತು ಉಡುಪಿ ನಗರ ವೃತ್ತ ನಿರೀಕ್ಷಕರಿಂದ ತನಿಖೆ ನಡೆಸಲು ಸೂಚಿಸಲಾಗಿದೆ’ ಎಂದು ಎಸ್ಪಿ ಡಾ.ಸಂಜೀವ ಪಾಟೀಲ್ ತಿಳಿಸಿದ್ದಾರೆ.