ಬೆಳ್ತಂಗಡಿ: ದ.ಕ.ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢ ಶಾಲಾ ವಾಲಿಬಾಲ್ ಪಂದ್ಯಾಟ
ಬೆಳ್ತಂಗಡಿ, ಸೆ. 16: ದ.ಕ.ಜಿಲ್ಲೆಯು ಉತ್ತಮ ಕ್ರೀಡಾತರಬೇತುದಾರರನ್ನು ಹೊಂದಿದ್ದು ಹಲವಾರು ಮಂದಿ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಖ್ಯಾತಿಗಳಿಸಿ ಆಟಗಾರರ ಜಿಲ್ಲೆ ಎಂದು ಗುರುತಿಸಲ್ಪಟ್ಟಿರುವುದು ಹೆಮ್ಮೆಯ ವಿಷಯ ಎಂದು ದ.ಕ.ಜಿ.ಪಂ.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಹೇಳಿದರು.
ಅಂಡಿಂಜೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಮೈದಾನದಲ್ಲಿ ದ.ಕ.ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗು ಪ್ರೌಢ ಶಾಲಾ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯು ಶಾಂತಿ, ಸಾಮರಸ್ಯಕ್ಕೆ ಕಾರಣವಾಗಬೇಕು. ಅಂಡಿಂಜೆ ಶಾಲೆಯಲ್ಲಿ ಪಂದ್ಯಾಟಕ್ಕೆ ಎಲ್ಲಾ ರೀತಿಯ ಅಚ್ಚುಕಟ್ಟಾದ ಪರಿಪೂರ್ಣ ವ್ಯವಸ್ಥೆ ಮಾಡಿರುವುದನ್ನು ಅವರು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್ ಮಾತನಾಡಿ, ಕ್ರೀಡೆ ಸಾಮಾರಸ್ಯ ಹಾಗೂ ವಿದ್ಯಾರ್ಥಿಗಳ ಮಧ್ಯೆ ಸಹೋದರತೆಯ ಭಾವನೆ ಬೆಳೆಸುತ್ತದೆ. ಇದು ಬಲಿಷ್ಠ ಭಾರತಕ್ಕೆ ನಿರ್ಮಾಣಕ್ಕೆ ಸಹಕಾರಿ ಆಗಲಿದೆ ಎಂದರು.
ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ, ಅಂಡಿಂಜೆ ಗ್ರಾ.ಪಂ. ಅಧ್ಯಕ್ಷ ಮೋಹನ್ ಅಂಡಿಂಜೆ, ದ.ಕ. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಚ್. ನಾಯಕ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ಶಿವಶಂಕರ ಭಟ್, ಉಪಾಧ್ಯಕ್ಷ ಶಿವಪ್ರಕಾಶ್ ಶೆಟ್ಟಿ, ಅಂಡಿಂಜೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ವಿಜಯಕುಮಾರ್, ಬೆಳ್ತಂಗಡಿ ಶಿಕ್ಷಣ ಸಂಯೋಜಕ ರಮೇಶ್ ಗೌಡ, ಡಯಟ್ ನಿರ್ದೇಶಕ ಸುಪ್ರಿಯನ್ ಮೊಂತೆರೋ, ಬೆಳ್ತಂಗಡಿ ಅಕ್ಷರ ದಾಸೋಹ ನಿರ್ದೇಶಕ ಲಕ್ಷ್ಮಣ ಶೆಟ್ಟಿ, ಅಂಡಿಂಜೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ., ಗ್ರಾ.ಪಂ. ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಯಶೋಧರ ಸುವರ್ಣ ಸ್ವಾಗತಿಸಿ, ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ರಘುನಾಥ ಪ್ರಸ್ತಾವಿಸಿದರು. ಶಾಲಾ ಮುಖ್ಯ ಶಿಕ್ಷಕ ಗುರುಮೂರ್ತಿ ಎಂ. ವಂದಿಸಿದರು. ಶಿಕ್ಷಕ ಶಶಿಧರ್ ಕಾರ್ಯಕ್ರಮ ನಿರ್ವಹಿಸಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಾಲಾ ಹಿರಿಯ ಶಿಕ್ಷಕಿ ಪ್ರೇಮಾ ಕೆ., ಶಿಕ್ಷಕ ವೃಂದ , ವಿದ್ಯಾರ್ಥಿಗಳು ಹಾಗೂ ವಿವಿಧ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರು ಸಹಕರಿಸಿದರು.