ಅಕ್ರಮ ಆಸ್ತಿ ಪ್ರಕರಣ: ಗೋವಾ ವಿಪಕ್ಷ ನಾಯಕನ ವಿರುದ್ಧ ಎಫ್‌ಐಆರ್
ಪಣಜಿ, ಸೆ.16: ಗೋವಾ ವಿಧಾನಸಭೆಯ ವಿಪಕ್ಷ ನಾಯಕ , ಕಾಂಗ್ರೆಸ್ ಮುಖಂಡ ಚಂದ್ರಕಾಂತ್ ಕವ್ಳೇಕರ್ ಅವರ ವಿರುದ್ಧ 2013ರಲ್ಲಿ ದಾಖಲಾಗಿದ್ದ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿ ಗೋವಾ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದವರು ಕವ್ಳೇಕರ್ ನಿವಾಸದ ಮೇಲೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದ್ದ ಆಸ್ತಿ ವಿವರಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿ ದಾಳಿ ನಡೆಸಲಾಗಿದೆ. ಪ್ರಧಾನ ಕಾರ್ಯದರ್ಶಿಯ ಕಚೇರಿಯಿಂದ ಒಪ್ಪಿಗೆಗಾಗಿ ಕಾಯುತ್ತಿದ್ದೆವು. ಇದೀಗ ರಾಜ್ಯ ಸರಕಾರ ಒಪ್ಪಿಗೆ ನೀಡಿದ್ದರಿಂದ ದಾಳಿ ನಡೆಸಲಾಗಿದ್ದು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸಿಬಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಚುನಾವಣೆ ಸಂದರ್ಭ ಕಾವ್ಳೇಕರ್ ಘೋಷಿಸಿದ ಆದಾಯಕ್ಕಿಂತ ಶೇ.59.21ರಷ್ಟು ಹೆಚ್ಚುವರಿ ಆಸ್ತಿ ಅಂದರೆ ಒಟ್ಟು 4,78, 58,471 ರೂಪಾಯಿ ಮೊತ್ತದ ಹೆಚ್ಚುವರಿ ಆಸ್ತಿ ಹೊಂದಿರುವುದು ಪತ್ತೆಯಾಗಿದೆ ಎಂದು ಎಸಿಬಿ ತಿಳಿಸಿದೆ.
ಇದೊಂದು ರಾಜಕೀಯ ದ್ವೇಷದ ಕ್ರಮವಾಗಿದೆ. ಕಾಂಗ್ರೆಸ್ ವಿರುದ್ಧ ಒತ್ತಡ ಹೇರಲು ನಡೆಸಿರುವ ಬೆದರಿಕೆಯ ಕ್ರಮವಾಗಿದೆ ಎಂದು ಕಾಂಗ್ರೆಸ್ ಮುಖಂಡ ಶಾಂತಾರಾಮ್ ನಾಯ್ಕ್ ಟೀಕಿಸಿದ್ದಾರೆ.