ಹಾಗಾದರೆ ನನ್ನ ತಂದೆಯನ್ನು ಹತ್ಯೆಗೈದವರು ಯಾರು?

Update: 2017-09-16 16:18 GMT

ಹೊಸದಿಲ್ಲಿ, ಸೆ. 16: ಗೋರಕ್ಷಣೆ ಹೆಸರಲ್ಲಿ ಹೈನೋದ್ಯಮಿ ಪೆಹ್ಲು ಖಾನ್ ಅವರನ್ನು ಥಳಿಸಿ ಹತ್ಯೆಗೈದ ಪ್ರಕರಣದ ಆರೋಪಿಗಳಿಗೆ ರಾಜಸ್ತಾನ ಪೊಲೀಸರು ಕ್ಲೀನ್ ಚಿಟ್ ನೀಡಿದ ಒಂದು ದಿನದ ಬಳಿಕ, ಪೆಹ್ಲು ಖಾನ್ ಅವರ ಕುಟುಂಬ ದಿಲ್ಲಿ ತಲುಪಿದ್ದು, ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುವಂತೆ ಹಾಗೂ ಪ್ರಕರಣವನ್ನು ರಾಜಸ್ತಾನದ ಹೊರಗೆ ವರ್ಗಾಯಿಸುವಂತೆ ಕೋರಿದೆ.

ಆರೋಪಿಗಳನ್ನು ಗುರುತಿಸಲು ಪೊಲೀಸರು ನಮಗೆ ಕರೆ ಕಳುಹಿಸಿರಲಿಲ್ಲ ಎಂದು ಪೆಹ್ಲು ಖಾನ್‌ನ ಪುತ್ರ ಇರ್ಶಾದ್ ಆರೋಪಿಸಿದ್ದಾರೆ.

ರಾಜ್ಯ ಸಭೆ ಸಂಸದ ಹಾಗೂ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರ ನಿವಾಸದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಇರ್ಶಾದ್, ನಾನು ದೃಕ್‌ಸಾಕ್ಷಿ. ಆದರೆ, ಆರೋಪಿಗಳನ್ನು ಗುರುತಿಸಲು ರಾಜಸ್ತಾನ ಪೊಲೀಸರು ನನಗೆ ಕರೆ ಕಳುಹಿಸಲಿಲ್ಲ. ಈಗ 13 ಆರೋಪಿಗಳಲ್ಲಿ 6 ಆರೋಪಿಗಳಿಗೆ ಕ್ಲೀನ್‌ಚಿಟ್ ನೀಡಲಾಗಿದೆ. ಐವರಿಗೆ ಜಾಮೀನು ದೊರೆತಿದೆ ಎಂದಿದ್ದಾರೆ.

ವಿಡಿಯೋದಲ್ಲಿರುವ ವ್ಯಕ್ತಿಗಳು ನನ್ನ ತಂದೆಯನ್ನು ಹತ್ಯೆ ನಡೆಸದೇ ಇದ್ದರೆ, ಮತ್ತೆ ಯಾರು ನನ್ನ ತಂದೆಯನ್ನು ಕೊಂದರು ಎಂದು ಇರ್ಶಾದ್ ಪ್ರಶ್ನಿಸಿದ್ದಾರೆ.

ಖಾನ್ ಅವರು ಮರಣದ ಸಂದರ್ಭದಲ್ಲಿ ಓಂ ಯಾದವ್, ಹುಕುಮ್ ಚಂದ್ ಯಾದವ್, ಸುಧೀರ್ ಯಾದವ್, ಜಗ್ಮಲ್ ಯಾದವ್, ನವೀನ್ ಶರ್ಮಾ ಹಾಗೂ ರಾಹುಲ್ ಸೈನಿ ಅವರ ಹೆಸರು ಉಲ್ಲೇಖಿಸಿದ್ದಾರೆ. ಎಲ್ಲರಿಗೂ ಕ್ಲೀನ್ ಚಿಟ್ ನೀಡಲಾಗಿದೆ. ಜಾಮೀನಿನಲ್ಲಿ ಹೊರಗಡೆ ಬಂದವರು ನಮಗೆ ಬೆದರಿಕೆ ಒಡ್ಡುತ್ತಿದ್ದಾರೆ. ನಮಗೆ ವಂಚಿಸಲಾಗಿದೆ. ನಾವು ಅಸಾಹಯಕರು ಎಂದು 24ರ ಹರೆಯದ ಇರ್ಶಾದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News